ADVERTISEMENT

ಒಳ ಮೀಸಲಾತಿ ಜಾರಿಗೆ ಒಮ್ಮತ: ಗೃಹ ಸಚಿವ ಜಿ. ಪರಮೇಶ್ವರ

‘ಪರಿಶೀಲನಾರ್ಹ ದತ್ತಾಂಶ’ದ ಆಧಾರದಲ್ಲಿ ವರ್ಗೀಕರಣಕ್ಕೆ ಸಹಮತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:01 IST
Last Updated 21 ಅಕ್ಟೋಬರ್ 2024, 16:01 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಎಲ್ಲ ಉಪ ಜಾತಿಗಳ ‘ಪರಿಶೀಲನಾರ್ಹ ದತ್ತಾಂಶ’ (ಎಂಫರಿಕಲ್‌ ಡಾಟಾ) ಆಧಾರದಲ್ಲಿ ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿ ಪ್ರತಿನಿಧಿಸುವ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಒಮ್ಮತ ವ್ಯಕ್ತಪಡಿಸಿದ್ದಾರೆ.

ಒಳ ಮೀಸಲಾತಿ ಜಾರಿ ಕುರಿತಂತೆ ಗೃಹ ಸಚಿವ ಜಿ. ಪರಮೇಶ್ವರ ನಿವಾಸದಲ್ಲಿ ಸೋಮವಾರ ಸಭೆ ನಡೆಯಿತು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಎಲ್ಲ ಸಚಿವರು, ಶಾಸಕ ದರ್ಶನ್ ಧ್ರುವ ನಾರಾಯಣ ಬಿಟ್ಟು ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಸಭೆಯಲ್ಲಿದ್ದರು.

ಪರಿಶೀಲನಾರ್ಹ ದತ್ತಾಂಶವಾಗಿ ಯಾವುದನ್ನು ಪರಿಗಣಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 2011ರಲ್ಲಿ ನಡೆದ ಜನಗಣತಿಯ ಮಾಹಿತಿ ಸದ್ಯ ಅಧಿಕೃತ ಅಂಕಿ ಅಂಶ. ದತ್ತಾಂಶವನ್ನು ಪರಿಗಣಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಸಿ ಪರಿಶಿಷ್ಟ ಜಾತಿಗಳ ಉಪಜಾತಿಗಳ ಸಮೀಕ್ಷೆ ನಡೆಸುವುದು ಸೂಕ್ತ ಎಂದು ಕೆಲವರು ಸಲಹೆ ನೀಡಿದರೆ, ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯಲ್ಲಿರುವ ಅಂಕಿಅಂಶಗಳನ್ನು ಪರಿಗಣಿಸುವ ಬಗ್ಗೆಯೂ ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಜಾತಿಗಣತಿ ವರದಿಯು ಸಮೀಕ್ಷಾ ವರದಿಯೇ ಹೊರತು ಜನಗಣತಿ ಅಲ್ಲ ಎಂಬ ಅಭಿಪ್ರಾಯವನ್ನು ಹಲವರು ಹಂಚಿಕೊಂಡರು.

ಸಭೆಯ ಬಳಿಕ ಮಾಹಿತಿ ನೀಡಿದ ಜಿ. ಪರಮೇಶ್ವರ, ‘ಒಳ ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಉಪ ಜಾತಿಗಳ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ’ ಎಂದರು.

‘ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯು ಅವೈಜ್ಞಾನಿಕವಾಗಿದೆ ಎನ್ನುವುದು ಕೆಲವರ ಆಕ್ಷೇಪ. ಅಲ್ಲದೆ, ಹಿಂದಿನ ಬಿಜೆಪಿ ಸರ್ಕಾರ ಈ ವರದಿಯನ್ನು ತಿರಸ್ಕರಿಸಿದೆ. ಪರಿಶಿಷ್ಟ ಜಾತಿಯ ಉಪ ಜಾತಿಗಳ ಅಧಿಕೃತ ಅಂಕಿಅಂಶ ಸದ್ಯ ಲಭ್ಯ ಇಲ್ಲ’ ಎಂದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ‘ನೈಜ ದತ್ತಾಂಶದ ಆಧಾರದಲ್ಲಿ ಒಳ ಮೀಸಲಾತಿ ಜಾರಿಗೆ ಎಲ್ಲರ ಸಹಮತವಿದೆ. ಇದು ಸಂವಿಧಾನಾತ್ಮಕ ವಿಚಾರ. ಹೀಗಾಗಿ ಎಲ್ಲ ಆಯಾಮಗಳಲ್ಲೂ ಪರಿಶೀಲಿಸಬೇಕಿದೆ. ಹರಿಯಾಣ, ತೆಲಂಗಾಣದಲ್ಲಿ ಏನು‌ ಮಾಡಿದ್ದಾರೆ. ಆ ಮಾದರಿಯನ್ನು ನಾವೂ ಪರಿಗಣಿಸಬೇಕೇ ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಆದರೆ, ನಮ್ಮ ಸರ್ಕಾರ ಒಳ‌ ಮೀಸಲಾತಿ ಜಾರಿ ಮಾಡಲು ಬದ್ಧವಾಗಿದೆ’ ಎಂದರು.

‘ಚುನಾವಣೆ ಮೊದಲೇ ಚಿತ್ರದುರ್ಗದಲ್ಲಿ ನಡೆದಿದ್ದ ಪರಿಶಿಷ್ಟರ ಸಮಾವೇಶದಲ್ಲಿ ಒಳ ಮೀಸಲಾತಿ ಜಾರಿಯ ಭರವಸೆ ನೀಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ‌ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದೆವು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ಸ್ಪಷ್ಟ ತೀರ್ಪು ನೀಡಿದೆ. ಹೀಗಾಗಿ, ನಾವೆಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದ್ದೇವೆ. ಮತ್ತೊಮ್ಮೆ ಗಣತಿ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಬೇಕಿದೆ’ ಎಂದರು.

ಪಿ.ಎಂ. ನರೇಂದ್ರಸ್ವಾಮಿ
ಸುಧಾಮ್‌ ದಾಸ್
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಎಲ್ಲರೂ ಸಹಮತಕ್ಕೆ ಬಂದಿದ್ದೇವೆ. ಆದರೆ ನೈಜ ದತ್ತಾಂಶದ ಆಧಾರದಲ್ಲಿ ಜಾರಿ ಮಾಡಬೇಕು ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಜಿ. ಪರಮೇಶ್ವರ ಗೃಹ ಸಚಿವ
ಪರಿಶಿಷ್ಟ ಜಾತಿಯ ನಾಯಕರ ನಡುವೆ ಒಳ ಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಪ್ರತಿರೋಧ ಇಲ್ಲ ಎನ್ನುವುದು ಈ ಸಭೆಯ ಮೂಲಕ ಸಾಬೀತಾಗಿದೆ
ಸುಧಾಮ್ ದಾಸ್‌ ವಿಧಾನ ಪರಿಷತ್‌ ಸದಸ್ಯ 
ಒಳ‌ ಮೀಸಲಾತಿ ಜಾರಿಗೆ ನಾವೆಲ್ಲ‌ರೂ ಬದ್ಧರಾಗಿದ್ದೇವೆ. ಶೀಘ್ರದಲ್ಲಿ ಮತ್ತೊಮ್ಮೆ ಸಭೆ ಸೇರಿ ಈ ವಿಚಾರವಾಗಿ ವಿಸ್ತೃತವಾಗಿ ಸಮಾಲೋಚನೆ ನಡೆಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ
ಪಿ.ಎಂ. ನರೇಂದ್ರಸ್ವಾಮಿ ಶಾಸಕ

ಜಾತಿಗಣತಿ ವಿರುದ್ಧ ಜಂಟಿ ಹೋರಾಟ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಬಹಿರಂಗಕ್ಕೆ ವಿರೋಧ ವ್ಯಕ್ತಪಡಿಸಿರುವ ವೀರಶೈವ–ಲಿಂಗಾಯತರು ಒಕ್ಕಲಿಗರ ಜತೆಗೂಡಿ ಹೋರಾಟ ರೂಪಿಸಲು ಮುಂದಾಗಿದ್ದಾರೆ. ಈ ಕುರಿತು ಚರ್ಚಿಸಲು ಹೋಟೆಲ್‌ ರ್‍ಯಾಡಿಷನ್‌ ಬ್ಲೂನಲ್ಲಿ ಅ. 22ರಂದು ಸಭೆ ವೀರಶೈವ–ಲಿಂಗಾಯತರ ಪ್ರಮುಖರ ಸಭೆ ನಡೆಯಲಿದೆ. ಸಭೆಯ ನಂತರ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಯಲಿದೆ. ವೀರಶೈವರಂತೆ ಒಕ್ಕಲಿಗರೂ ಜಾತಿಗಣತಿ ಬಹಿರಂಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಎರಡೂ ಸಮುದಾಯಗಳು ಜಂಟಿಯಾಗಿ ಹೋರಾಟ ರೂಪಿಸಲು ಅಣಿಯಾಗುತ್ತಿವೆ. ‘ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಸಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಗುಳೆ ಹೋದವರನ್ನು ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ. ನಮ್ಮಲ್ಲೂ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡರೆ ಸಮುದಾಯದ ಲಕ್ಷಾಂತರ ಮಂದಿಗೆ ಅನ್ಯಾಯವಾಗುತ್ತದೆ’ ಎಂದು ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು ವಿರೋಧ ವ್ಯಕ್ತಪಡಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ  ವೀರಶೈವ ಲಿಂಗಾಯತರ ನಡೆಯುತ್ತಿದೆ. ಸಭೆಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಸಮುದಾಯದ ಮುಖಂಡರು ಕೆಲ ಮಠಾಧೀಶರು ಮಹಾಸಭಾದ ಪ್ರಮುಖರು ಭಾಗವಹಿಸುತ್ತಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.