ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಕನ್ನಡ ಚಿತ್ರನಟಿ ರಮ್ಯಾ (ದಿವ್ಯಾ ಸ್ಪಂದನ) ಭಾಗಿಯಾಗಿದ್ದಾರೆ ಎಂದು ಏಷಿಯಾನೆಟ್ ಚಾನೆಲ್ ಭಿತ್ತರಿಸಿದ್ದ ಸುದ್ದಿಗೆ ಸಂಬಂಧಿಸಿದಂತೆ ರಮ್ಯಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸುವಂತೆ ಕೋರಿ ಏಷಿಯಾನೆಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ದೂರುದಾರರ ಹೆಸರನ್ನು ಪದೇ ಪದೇ ಉಲ್ಲೇಖಿಸಲಾಗಿದೆ ಮತ್ತು ಸುದ್ದಿ ಪ್ರಸಾರ ಮಾಡುವಾಗ ಅವರ ಪೋಟೊಗಳು ಮತ್ತು ವಿಡಿಯೊಗಳನ್ನು ತೋರಿಸಲಾಗಿದೆ. ನಾವು ಇದನ್ನು ಹೇಗೆ ರದ್ದುಗೊಳಿಸಬಹುದು? ಎಂದು ನ್ಯಾಯಾಪೀಠ ಪ್ರಶ್ನೆ ಮಾಡಿದೆ.
ಪ್ರಕರಣವನ್ನು ರದ್ದುಪಡಿಸುವಂತೆ ಸುದ್ದಿವಾಹಿನಿಯು ಈ ಹಿಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಯುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ಸುದ್ದಿವಾಹಿನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ನಂತರ ಸುದ್ದಿವಾಹಿನಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ರದ್ದುಪಡಿಸಿವಂತೆ ಮನವಿ ಸಲ್ಲಿಸಿತ್ತು.
2013 ಮೇ 31ರಂದು ಸುದ್ದಿವಾಹಿನಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ನಾನು ಭಾಗಿಯಾಗಿರುವುದಾಗಿ ಸುದ್ದಿ ಪ್ರಕಟಿಸಲಾಗಿತ್ತು. ತಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವಂತೆ ಹಾಗೂ ಸಿನಿಮಾ ರಂಗದಲ್ಲಿ ನನ್ನ ಹೆಸರು ಹಾಳಾಗುವ ರೀತಿಯಲ್ಲಿ ಆಧಾರ ರಹಿತವಾಗಿ ಸುದ್ದಿ ಬಿತ್ತರ ಮಾಡಲಾಗಿದೆ ಎಂದು ರಮ್ಯಾ ದೂರು ನೀಡಿದ್ದರು.
2016ರಲ್ಲಿ ಸುದ್ದಿವಾಹಿನಿಯ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.