ADVERTISEMENT

ಪ್ರಜ್ವಲ್‌ ವಿರುದ್ಧದ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪಿಟಿಐ
Published 10 ಜುಲೈ 2024, 7:44 IST
Last Updated 10 ಜುಲೈ 2024, 7:44 IST
<div class="paragraphs"><p>ಭವಾನಿ ರೇವಣ್ಣ</p></div>

ಭವಾನಿ ರೇವಣ್ಣ

   

ನವದೆಹಲಿ: ಮಾಜಿ ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪಕ್ಕೆ ಗುರಿಯಾಗಿರುವ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ. 

ಭವಾನಿ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ವಿಶೇಷ ತನಿಖಾ ದಳವು (ಎಸ್‌ಟಿ) ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಭವಾನಿ ಅವರಿಗೆ ನೋಟಿಸ್‌ ಜಾರಿ ಮಾಡಿದೆ. 

ADVERTISEMENT

ಕರ್ನಾಟಕ ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್‌, ‘ಸಂತ್ರಸ್ತೆಯ ಅಪಹರಣ ಮಾಡಿದ ಪ್ರಕರಣವಿದು. ಸಂತ್ರಸ್ತೆಯನ್ನು ಅಪಹರಿಸಲು ಭವಾನಿ ನಿರ್ದೇಶನ ನೀಡಿದ್ದರು. ಈ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಅವರು ಆರೋಪದಿಂದ ಮುಕ್ತವಾಗಿಲ್ಲ. ವಿಚಾರಣೆ ಎದುರಿಸಬೇಕು. ಅವರಿಗೆ ನಿರೀಕ್ಷಣಾ ಜಾಮೀನು ನೀಡಿರುವುದು ದುರದೃಷ್ಟಕರ’ ಎಂದರು. 

ಸಿಬಲ್ ಮಾತುಗಳನ್ನು ಆಲಿಸಿದ ಪೀಠವು, ‘ಪ್ರತಿವಾದಿಯ ವಿರುದ್ಧದ ಪ್ರಕರಣದಲ್ಲಿ ಏನೂ ಇಲ್ಲ. ವಿಷಯವನ್ನು ರಾಜಕೀಯಗೊಳಿಸುವುದು ಬೇಡ’ ಎಂದು ಮೌಖಿಕವಾಗಿ ಹೇಳಿತು.

‘ಈ ರೀತಿಯ ಆರೋಪಗಳ ಸಂದರ್ಭದಲ್ಲಿ, ಮಗ ಮಾಡಿದ ಅಪರಾಧಕ್ಕೆ ಕುಮ್ಮಕ್ಕು ನೀಡುವಲ್ಲಿ ತಾಯಿಯ ಪಾತ್ರವೇನು?’ ಎಂದು ಪೀಠ ಪ್ರಶ್ನಿಸಿತು.

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ಎಚ್‌.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದ ಕಾರಣ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.