ಬೆಂಗಳೂರು: ‘ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಹೊಸತಾಗಿ ಸಮೀಕ್ಷೆ ನಡೆಸಿದ ನಂತರವೇ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಈ ಬೇಡಿಕೆಗೆ ಬಲ ನೀಡಲು ಎಲ್ಲ ಬಲಗೈ ಸಮುದಾಯಗಳು ಸಂಘಟಿತರಾಗಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು’ ಎಂದು ರಾಜ್ಯ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಬಲಗೈ ಒಳ ಮೀಸಲಾತಿ ಅನುಷ್ಠಾನ ಜಾಗೃತಿ ಸಮಿತಿ ಶನಿವಾರ ‘ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಒಳ ಮೀಸಲಾತಿ’ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ನಾಯಕರು, ‘ಒಳ ಮೀಸಲಾತಿಗೆ ನಮ್ಮ ವಿರೋಧ ಇಲ್ಲ. ಆದರೆ, ಎಲ್ಲ ಗೊಂದಲಗಳಿಗೆ ಹೊಸತಾಗಿ ಜಾತಿಗಳ ಸಮೀಕ್ಷೆ ನಡೆಸುವುದೇ ನಿಜವಾದ ಪರಿಹಾರ’ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಎಸ್‌ಸಿ ಮಾಜಿ ಸದಸ್ಯರೂ ಆಗಿರುವ ನಿವೃತ್ತ ಕೆಎಎಸ್ ಅಧಿಕಾರಿ ದಾಸಯ್ಯ, ‘ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನಡೆಸಿದ್ದ ಸಮೀಕ್ಷೆಯ ವರದಿಯು ಅವೈಜ್ಞಾನಿಕವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವರು ನಡೆಸಿರುವುದು ಮಾದರಿ ಸಮೀಕ್ಷೆಯಷ್ಟೆ. ಅದನ್ನು ಒಪ್ಪಲು ಸಾಧ್ಯ ಇಲ್ಲ. ಹೀಗಾಗಿ ಹೊಸತಾಗಿ ಸಮೀಕ್ಷೆ ನಡೆಸಿ, ಪರಿಶೀಲಾನಾರ್ಹ ದತ್ತಾಂಶ ಸಂಗ್ರಹಿಸಿದ ಬಳಿಕ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದರು.
‘ಕೇಂದ್ರ ಸರ್ಕಾರ ಶೀಘ್ರದಲ್ಲಿ 2021ರ ಜನಗಣತಿ ನಡೆಸುವ ಸಾಧ್ಯತೆ ಇದೆ. ಅದರಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನೀಡಿರುವ ಮಾನದಂಡಗಳನ್ನು ಪಾಲಿಸಲು ಸಾಧ್ಯ ಆಗಬಹುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕು’ ಎಂದು ಹೇಳಿದರು.
ಸಮಿತಿಯ ಸಂಚಾಲಕ ಡಾ. ನವೀನ್ ಮನಿಯ, ವಕೀಲ ಎಚ್.ಡಿ. ಅಮರನಾಥನ್, ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಂಘದ ಅಧ್ಯಕ್ಷ ಡಿ. ಶಿವಶಂಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.