ADVERTISEMENT

ಎಸ್‌ಸಿ, ಎಸ್‌ಟಿ ನೌಕರರ ಸಮಸ್ಯೆ: ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 20:29 IST
Last Updated 7 ಜನವರಿ 2024, 20:29 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು:‘ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ‘ಬಿ.ಕೆ. ಪವಿತ್ರ– 2’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2019ರ ಮೇ 19ರಂದು ನೀಡಿರುವ ತೀರ್ಪಿನ ನಂತರ ರಾಜ್ಯ ಸರ್ಕಾರ ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ. ಆದರೆ, ಈ ಕಾಯ್ದೆಯ ಅನ್ವಯ ಬಹುತೇಕ ಇಲಾಖೆಗಳು ಜ್ಯೇಷ್ಠತೆ ನಿಗದಿಪಡಿಸಿ ಮುಂಬಡ್ತಿ ನೀಡುತ್ತಿಲ್ಲ. ಈ ಬಗ್ಗೆ ಸಭೆ ನಡೆಸಬೇಕು ಎಂದು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ತಿಳಿಸಿದ್ದಾರೆ. 

‘ಬಿ.ಕೆ. ಪವಿತ್ರ– 1ರ ತೀರ್ಪಿನ ಅನ್ವಯ 3,898 ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಬಡ್ತಿ ನೀಡಲಾಗಿತ್ತು. ಸಾಮಾನ್ಯ ವರ್ಗದ 5,002 ನೌಕರರಿಗೆ ಮುಂಬಡ್ತಿ ನೀಡಿ, ಸುಮಾರು 65 ಸಾವಿರ ನೌಕರರ ಜ್ಯೇಷ್ಠತೆಯನ್ನು ಕೆಳಹಂತದಲ್ಲಿ ನಿಗದಿಪಡಿಸಲಾಗಿತ್ತು. ಇದರಿಂದ ಮಾನಸಿಕವಾಗಿ ತೀವ್ರವಾಗಿ ನೊಂದ ಕೆಲವು ಪರಿಶಿಷ್ಟಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲವರು ಹೃದಯಾಘಾತಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಜ್ಯೇಷ್ಠತೆ ಸಂರಕ್ಷಣಾ ಕಾಯ್ದೆ ತಂದರೂ ಅದರಲ್ಲಿರುವ ಸೌಲಭ್ಯಗಳು ಪರಿಶಿಷ್ಟ ನೌಕರರಿಗೆ ಲಭ್ಯವಾಗುತ್ತಿಲ್ಲ’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಅವರು ತಿಳಿಸಿದ್ದಾರೆ. 

‘ಹಿಂದಿನ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ 17 ಕ್ಕೆ ಎಸ್‌ಟಿ ಮೀಸಲಾತಿಯನ್ನು ಶೇ 7 ಕ್ಕೆ ಹೆಚ್ಚಿಸಿದರೂ, ಆ ಸೌಲಭ್ಯವೂ ಸಿಗುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಸಂಪುಟದಲ್ಲಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರು, ಅಡ್ವೊಕೇಟ್‌ ಜನರಲ್, ಡಿಪಿಎಆರ್‌, ಕಾನೂನು ಮತ್ತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯ ಜೊತೆ ಸಭೆ ನಡೆಸಬೇಕು’ ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.