ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿಯಡಿ ನೀಡುವ ಕಾಮಗಾರಿಗಳ ಮೊತ್ತವನ್ನು ₹50 ಲಕ್ಷದಿಂದ ₹1 ಕೋಟಿಗೆ ಏರಿಸಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್ ಕರೆಯುವಾಗ ಟೆಂಡರ್‌ಗಳ ಸಂಖ್ಯೆಯಲ್ಲಿ ಶೇ 24.1ರಷ್ಟು ಮೀಸಲಾತಿ ನೀಡುವ ನಿಯಮವನ್ನು ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಜಾರಿಗೊಳಿಸಲಾಗಿತ್ತು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಮಗಾರಿ ಮೊತ್ತದ ಮಿತಿಯನ್ನು ₹1 ಕೋಟಿವರೆಗೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು.
ಮಿತಿಯ ಹೆಚ್ಚಳಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲು ಮಂಡಿಸಬೇಕಾದ ತಿದ್ದುಪಡಿ ಮಸೂದೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಹೇಳಿದರು.
ಪ್ರಮುಖ ಅಂಶಗಳು:
*ಕೃಷ್ಣಾ, ಕಾವೇರಿ, ಮಹದಾಯಿ ನೀರಾವರಿ ಯೋಜನೆಗಳ ನ್ಯಾಯಮಂಡಳಿಗಳ ತೀರ್ಪು ಪರಿಶೀಲಿಸಿ ಜಾರಿಗೊಳಿಸುವ ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
*ಸಂಘ ಸಂಸ್ಥೆಗಳು ನಡೆಸಿದ ಹೋರಾಟದ ಸಂದರ್ಭಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಸಂಬಂಧ ಪರಿಶೀಲನೆ ನಡೆಸಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಯಾವುದೇ ಸಂಘಟನೆಗಳಿಗೆ ಸೇರಿದ್ದರೂ ನಿರಪರಾಧಿಗಳ ಮೇಲೆ ತಪ್ಪಾಗಿ ಪ್ರಕರಣಗಳು ದಾಖಲಾಗಿದ್ದರೆ, ಅವುಗಳನ್ನು ಹಿಂದಕ್ಕೆ ಪಡೆಯಲಾಗುವುದು.
*ಬೃಹತ್ ಪ್ರಮಾಣದ ಕೈಗಾರಿಕಾ ಬಂಡವಾಳ ಹೂಡಿಕೆಗಳ ಮೇಲೆ ಉತ್ತೇಜನ ಧನ ಮತ್ತು ವಿಶೇಷ ರಿಯಾಯ್ತಿಗಳನ್ನು ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನ.
*ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ವಿಶೇಷ ಅಭಿವೃದ್ಧಿ ವಾಹಕಗಳಿಗೆ ನೀಡಿದ್ದ ಯೋಜನಾ ವರದಿಗಳ ಪರಿಷ್ಕರಣೆ, ಕಾಲಾವಧಿ ವಿಸ್ತರಣೆ ಮತ್ತು ಹಣಕಾಸು ಹಂಚಿಕೆ ಅಧಿಕಾರವನ್ನು ವಾಪಸ್ ಪಡೆಯಲಾಗಿದೆ. ಈಗಿರುವ ಮುಂಗಡ ಪತ್ರದ ಮಿತಿಯಲ್ಲಿ ₹980 ಕೋಟಿಯಲ್ಲಿ ಉಪಯೋಜನೆ ಕೈಗೊಳ್ಳಲು ಅನುಮತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.