ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಭೂರಹಿತ ಕುಟುಂಬಗಳಿಗೆ ‘ಭೂ ಒಡೆತನ’ ಯೋಜನೆ ಅಡಿಯಲ್ಲಿ ವಿತರಿಸಲು ಖರೀದಿಸುವ ಜಮೀನಿಗೆ ಮಾರ್ಗಸೂಚಿ ದರದ ಐದು ಪಟ್ಟಿನವರೆಗೂ ದರ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಯೋಜನೆಯ ಘಟಕ ವೆಚ್ಚ ಹೆಚ್ಚಿಸುವ ಚರ್ಚೆ ನಡೆದಿದೆ.
ಭೂ ಒಡೆತನ ಯೋಜನೆಯಡಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಹೆಚ್ಚಿನ ಬಡ ಕುಟುಂಬಗಳಿಗೆ ಜಮೀನು ಒದಗಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಆಸಕ್ತಿ ತೋರಿದೆ. ಆದರೆ, ಸೂಕ್ತ ಜಮೀನುಗಳೇ ಲಭ್ಯವಾಗುತ್ತಿಲ್ಲ. ಈ ಕಾರಣದಿಂದ ಯೋಜನೆಯ ಘಟಕ ವೆಚ್ಚ ಹೆಚ್ಚಿಸಿ, ಖರೀದಿಸುವ ಜಮೀನಿಗೆ ಮಾರ್ಗಸೂಚಿ ದರದ ಐದು ಪಟ್ಟಿನವರೆಗೂ ದರ ನೀಡಲು ಮುಂದಾಗಿದೆ.
ಭೂ ಒಡೆತನ ಯೋಜನೆ 1990 ರಿಂದಲೂ ಜಾರಿಯಲ್ಲಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ನಿಗಮಗಳ ಮೂಲಕ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಭೂರಹಿತ ಕುಟುಂಬಗಳಿಗೆ ಎರಡು ಎಕರೆಯವರೆಗೂ ಜಮೀನು ಹಂಚಿಕೆ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಜಮೀನು ಖರೀದಿಸಿ, ವಿತರಿಸುವ ಪ್ರಕ್ರಿಯೆ ನಡೆಸುತ್ತದೆ. ಈಗ ಮಾರ್ಗಸೂಚಿ ದರದ ಮೂರು ಪಟ್ಟು ದರ ನೀಡುವುದಕ್ಕೆ ಅವಕಾಶವಿದೆ. ಅದನ್ನು ಐದು ಪಟ್ಟುಗಳವರೆಗೂ ಹೆಚ್ಚಿಸಿದರೆ ಅಗತ್ಯ ಪ್ರಮಾಣದ ಜಮೀನು ಖರೀದಿಗೆ ಲಭ್ಯವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಭೂ ಒಡೆತನ ಯೋಜನೆಯಡಿ ಖರೀದಿಸುವ ಜಮೀನಿಗೆ ಮಾರ್ಗಸೂಚಿ ದರದ ಐದು ಪಟ್ಟಿನವರೆಗೂ ದರ ನೀಡುವುದಕ್ಕೆ ಅವಕಾಶ ಒದಗಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಸದ್ಯ, ಈಗ ಇರುವ ಮಿತಿಯಲ್ಲೇ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.