ಬೆಂಗಳೂರು: ಎಲ್ಲ ಇಲಾಖೆಗಳಲ್ಲಿ ಐದು ವರ್ಷ ಕರ್ತವ್ಯ ಸಲ್ಲಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಲಭ್ಯ ಇಲ್ಲದೇ ಇದ್ದರೆ, ಕನಿಷ್ಠ 3 ವರ್ಷ ಕರ್ತವ್ಯ ಸಲ್ಲಿಸಿದ ಅರ್ಹರನ್ನು ಮುಂಬಡ್ತಿಗೆ ಪರಿಗಣಿಸಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ನೀಡಿದ್ದ ನಿರ್ದೇಶನವನ್ನು ಉಲ್ಲೇಖಿಸಿ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮುಂಬಡ್ತಿಗೆ 5 ವರ್ಷಗಳ ಅರ್ಹತಾದಾಯಕ ಕರ್ತವ್ಯ ಸಲ್ಲಿಸಿದ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಲಭ್ಯ ಇಲ್ಲದಿದ್ದರೆ ಕನಿಷ್ಠ 3 ವರ್ಷ ಕರ್ತವ್ಯ ಸಲ್ಲಿಸಿದವರನ್ನು ಪರಿಗಣಿಸುವ ಕುರಿತಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್ 1982ರ ನ. 2ರಂದೇ ಸೂಚಿಸಿತ್ತು. ಈ ಆದೇಶವಾಗಿ 42 ವರ್ಷ ಕಳೆದರೂ ಕೆಲವು ಇಲಾಖೆಗಳು ಇನ್ನೂ ಈ ನಿಯಮವನ್ನು ಅಳವಡಿಸಿಕೊಂಡಿಲ್ಲ.
ಈ ತಿದ್ದುಪಡಿ ಅಳವಡಿಸಿಕೊಳ್ಳದ ಕಾರಣ ಮುಂಬಡ್ತಿಯಿಂದ ವಂಚಿತರಾಗುತ್ತಿರುವ ಬಗ್ಗೆ ಕೆಲವು ಅಧಿಕಾರಿ, ಸಿಬ್ಬಂದಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು. ಜೂನ್ 20ರಂದು ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದ್ದು, ಈ ನಿಯಮವನ್ನು ಇನ್ನೂ ಅಳವಡಿಸಿಕೊಳ್ಳದ ಇಲಾಖೆಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
ಯಾವ್ಯಾವ ಇಲಾಖೆಗಳು ಇನ್ನೂ ಈ ನಿಯಮವನ್ನು ಅಳವಡಿಸಿಕೊಂಡಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದು ಆಯುಕ್ತರಿಗೆ ಸಲ್ಲಿಸುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸಮಾಜ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.