ADVERTISEMENT

ಮದ್ಯದಂಗಡಿ ಪರವಾನಗಿಯಲ್ಲೂ ಮೀಸಲು: ವಿಧಾನಮಂಡಲದ SC, ST ಕಲ್ಯಾಣ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 18:39 IST
Last Updated 6 ಡಿಸೆಂಬರ್ 2023, 18:39 IST
   

ವಿಧಾನಸಭೆ: ಮದ್ಯದಂಗಡಿಗಳ ಪರವಾನಗಿಯಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ವಿಧಾನ ಮಂಡಲದ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.

ಸಮಾಜ ಕಲ್ಯಾಣ, ಆರ್ಥಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸೇರಿದಂತೆ ಏಳು ಇಲಾಖೆಗಳಿಗೆ ಸಂಬಂಧಿಸಿದ ಸಮಿತಿಯ ವರದಿಯನ್ನು ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಬುಧವಾರ ಸದನದಲ್ಲಿ ಮಂಡಿಸಿದರು.

‘ಸಿಎಲ್‌–2, ಸಿಎಲ್‌–7, ಸಿಎಲ್‌–9, ಸಿಎಲ್‌–11 ಮದ್ಯದಂಗಡಿಗಳ ಪರವಾನಗಿಯಲ್ಲಿ ಬ್ಯಾಕ್‌ಲಾಗ್‌ ಅನ್ನೂ ಒಳಗೊಂಡಂತೆ ಪರಿಶಿಷ್ಟರಿಗೆ ಮೀಸಲಾತಿ ನೀಡಬೇಕು’ ಎಂದು ಸಮಿತಿಯು ಶಿಫಾರಸು ಮಾಡಿದೆ.

ADVERTISEMENT

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಳಸಲು ಅವಕಾಶ ನೀಡಬಾರದು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆಯಾಗದಿದ್ದರೂ ಅದೇ ಇಲಾಖೆಗಳಲ್ಲಿ ಮುಂದುವರಿಸಲು ಅನುಮತಿ ಕೊಡಬಾರದು ಎಂದು ಶಿಫಾರಸು ಮಾಡಲಾಗಿದೆ.

ಎಸ್‌.ಸಿ ಮತ್ತು ಎಸ್‌.ಟಿ ಜನರಿಗೆ ಸ್ಮಶಾನಕ್ಕಾಗಿ ಜಮೀನು ಮೀಸಲಿಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು. ಭೂ ಒಡೆತನ ಯೋಜನೆಯಡಿ ಪರಿಶಿಷ್ಟರಿಗೆ ಜಮೀನು ನೀಡಲು ಒದಗಿಸುತ್ತಿರುವ ಅನುದಾನದ ಮೊತ್ತವನ್ನು ಪ್ರತಿ ಎಕರೆಗೆ ₹ 25 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಶಿಫಾರಸುಗಳು ವರದಿಯಲ್ಲಿವೆ.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನವನ್ನು ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡುವುದನ್ನು ತಪ್ಪಿಸಲು ಕಾಯ್ದೆಯ ಸೆಕ್ಷನ್‌ 7–ಡಿ ತೆಗೆದು ಹಾಕಲಾಗುತ್ತಿದೆ. ಆದರೆ, ಅದೇ ರೀತಿಯಲ್ಲಿ ಸೆಕ್ಷನ್‌ 7–ಬಿ ಮತ್ತು 7–ಸಿ ಅಡಿಯಲ್ಲಿ ಅನುದಾನ ವರ್ಗಾವಣೆ ಆಗದಂತೆ ತಡೆಯಬೇಕು ಎಂದು ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.