ಪಿರಿಯಾಪಟ್ಟಣ (ಮೈಸೂರು): ಪರಿಶಿಷ್ಟ ಜಾತಿಯ ವಿಧವೆಯರ ವಿವಾಹ ಯೋಜನೆಯಡಿ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ, ಮಧ್ಯವರ್ತಿ, ಹೊನ್ನೇನಹಳ್ಳಿಯ ಲೋಕೇಶ್ ಗುರುವಾರ ತಪ್ಪೊಪ್ಪಿಕೊಂಡಿದ್ದು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಅವರನ್ನು ಅಮಾನತು ಮಾಡಲಾಗಿದೆ.
ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಮೇಗೌಡ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ತಬ್ಬಿಬ್ಬಾಗಿ ತಪ್ಪೊಪ್ಪಿಕೊಂಡ: ‘ತಾಲ್ಲೂಕಿನಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ವಿಧವೆಯರ ಪುನರ್‌ವಿವಾಹ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇದರಲ್ಲಿ ತಮ್ಮ ಕೈವಾಡವಿಲ್ಲ’ ಎಂದು ಸ್ಪಷ್ಟನೆ ನೀಡುವುದಕ್ಕಾಗಿ, ಆರೋಪಿ ಲೋಕೇಶ್ ಗುರುವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ತಮ್ಮ ಪರವಾಗಿ ಹೇಳಿಕೆ ನೀಡಲು ಫಲಾನುಭವಿಗಳನ್ನೂ ಕರೆದುಕೊಂಡು ಬಂದಿದ್ದರು.
ತಮ್ಮ ವಿರುದ್ಧ ಆರೋಪ ಮಾಡಿದವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುವುದಾಗಿ ಹೇಳಿದಾಗ, ಪತ್ರಕರ್ತರು ಪ್ರಶ್ನೆಗಳನ್ನು ಹರಿಬಿಟ್ಟರು. ಆಗ ಅವರು ಉತ್ತರಿಸಲು ಪರದಾಡಿದರು.
ಇದೇ ಸಂದರ್ಭವನ್ನು ಬಳಸಿಕೊಂಡ ಫಲಾನುಭವಿಗಳಾದ ಗೀತಾ–ಕರಿಯ, ಭಾಗ್ಯ–ಕುಮಾರ ದಂಪತಿ, ಆರೋಪಿ ವಿರುದ್ಧ ಕಿಡಿಕಾರಿದರು.
‘ನಮ್ಮ ಈ ಸ್ಥಿತಿಗೆ ಇವರೇ ಕಾರಣ. ಸಹಾಯಧನ ಕೊಡಿಸುವುದಾಗಿ ನಂಬಿಸಿ, ನಮ್ಮಿಂದ ದಾಖಲೆ ಪಡೆದಿದ್ದಾರೆ. ಪತಿ ಬದುಕಿದ್ದರೂ ಬೇರೊಬ್ಬರ ಮರಣ ಪ್ರಮಾಣಪತ್ರ ಪಡೆದು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮತ್ತೊಮ್ಮೆ ನಮ್ಮ ಮದುವೆ ನೋಂದಣಿ ಮಾಡಿಸಿದ್ದಾರೆ. ನಮ್ಮ ಖಾತೆಗೆ ಬಂದ ₹ 3 ಲಕ್ಷದಲ್ಲಿ, ₹ 2.50 ಲಕ್ಷ ಅವರೇ ಬಿಡಿಸಿಕೊಂಡಿದ್ದಾರೆ’ ಎಂದು ದೂರಿದರು.
ಇದರಿಂದ ವಿಚಲಿತನಾದ ಲೋಕೇಶ್, ‘ಇದು ನಿಜ. ಮರು ಮದುವೆಗೆ ನಾನೇ ಸಾಕ್ಷಿ ಸಹಿ ಹಾಕಿದ್ದೇನೆ. ಫಲಾನುಭವಿ ಮಹಿಳೆ ಖಾತೆಯಿಂದ ಬಿಡಿಸಿಕೊಂಡ ₹ 2.50 ಲಕ್ಷದಲ್ಲಿ ₹ 2.30 ಲಕ್ಷವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡರಿಗೆ ಸಿಬ್ಬಂದಿ ಮೂಲಕ ನೀಡಿದ್ದೇನೆ. ಹಣದ ಆಸೆಗೆ ಈ ರೀತಿ ಮಾಡಿದ್ದೇನೆ’ ಎಂದು ತಪ್ಪೊಪ್ಪಿಕೊಂಡರು.
‘ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೂ, ಈ ಹಗರಣಕ್ಕೂ ಸಂಬಂಧವಿಲ್ಲ. ಅವರನ್ನು ನಾನು ಈವರೆಗೂ ಭೇಟಿ ಮಾಡಿಲ್ಲ. ಹಣವನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ವರದಿ ಪರಿಣಾಮ
ಪರಿಶಿಷ್ಟ ಜಾತಿಯ ವಿಧವೆಯರ ಪುನರ್ ವಿವಾಹ ಯೋಜನೆಯ ಹಣ ದುರ್ಬಳಕೆ ಆಗಿರುವ ಬಗ್ಗೆ ‘ಪ್ರಜಾವಾಣಿ’ಯ ಅ. 20ರ ಸಂಚಿಕೆಯ ‘ಒಳನೋಟ’ದಲ್ಲಿ ವಿಸ್ತೃತವಾಗಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.