ADVERTISEMENT

‘ಗ್ಯಾರಂಟಿ’ಗೆ ಪರಿಶಿಷ್ಟರ ಹಣ: ಬಿಜೆಪಿ–ಜೆಡಿಎಸ್‌ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:37 IST
Last Updated 22 ಜುಲೈ 2024, 15:37 IST
   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಹಣವನ್ನು (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಬಿಜೆಪಿ–ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಕೇಶವ ಪ್ರಸಾದ್, ಸುನೀಲ್‌ ವಲ್ಯಾ‍ಪುರೆ, ಡಾ.ಧನಂಜಯ ಸರ್ಜಿ ಮಾತನಾಡಿ, ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎಲ್ಲ ವರ್ಗದ ಜನರಿಗೂ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ, ಪರಿಶಿಷ್ಟರಿಗೆ ಮೀಸಲಾದ ಅನುದಾನವನ್ನು ಯೋಜನೆಗೆ ಬಳಕೆ ಮಾಡುತ್ತಿರುವುದು ಸರಿಯಲ್ಲ. ಅಷ್ಟು ಹಣವನ್ನು ಪರಿಶಿಷ್ಟರಿಗೆ ಬಳಸಿದರೆ ಸಮುದಾಯದ ಶಿಕ್ಷಣ, ಭೂಮಿ ಖರೀದಿ, ಕೊಳವೆ ಬಾವಿ ಸೇರಿದಂತೆ ಇತರೆ ಸೌಲಭ್ಯಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಬಹುದು ಎಂದು ಪ್ರತಿಪಾದಿಸಿದರು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ಕುರಿತು ‘ಪ್ರಜಾವಾಣಿ’ಯಲ್ಲಿ ಈಚೆಗೆ ಪ್ರಕಟವಾಗಿದ್ದ ವರದಿ ಪ್ರದರ್ಶಿಸಿದರು.

ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಮಾಜಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ, ‘ನಿಯಮದ ಪ್ರಕಾರವೇ ಹಣ ಬಳಕೆ ಮಾಡಲಾಗಿದೆ. ಕೇಂದ್ರದ ನೀತಿ ಆಯೋಗವೂ ಸಹ ಪರಿಶಿಷ್ಟರ ಹಣವನ್ನು ಅವರು ಫಲಾನುಭವಿಗಳಾಗಿರುವ ಯಾವುದೇ ಯೋಜನೆಗೆ ಬಳಕೆ ಮಾಡಬಹುದು ಎಂದು ಹೇಳಿದೆ. ಹಿಂದಿನ ಸರ್ಕಾರ ಬೇರೆ ಉದ್ದೇಶಗಳಿಗೂ ಪರಿಶಿಷ್ಟರಿಗೆ ಮೀಸಲಾದ ಹಣ ಖರ್ಚು ಮಾಡಿತ್ತು. ಅದಕ್ಕಾಗಿ ನಿಯಮಕ್ಕೆ ತಿದ್ದುಪಡಿಯನ್ನೂ ತಂದಿದ್ದೇವೆ. ದುರ್ಬಳಕೆ ತಡೆದಿದ್ದೇವೆ’ ಎಂದರು.

ADVERTISEMENT

ಮಹದೇವಪ್ಪ ಅವರ ಮಾತು ಮುಗಿಯುವ ಮುನ್ನವೇ ಬಿಜೆಪಿ–ಜೆಡಿಎಸ್‌ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.