ADVERTISEMENT

ಜಾತಿ ಪ್ರಮಾಣಪತ್ರ ವಿತರಣೆಗೆ ಶಾಲಾ ದಾಖಲಾತಿಯೇ ಅಂತಿಮ: ಜೆ.ಸಿ. ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:30 IST
Last Updated 22 ಫೆಬ್ರುವರಿ 2023, 22:30 IST
   

ಬೆಂಗಳೂರು: ಜಾತಿ ಪ್ರಮಾಣಪತ್ರ ವಿತರಣೆಗೆ ಶಾಲಾ ದಾಖಲಾತಿಯೇ ಪ್ರಮುಖ ಆಧಾರ. ಶಾಲಾ ದಾಖಲಾತಿ ವೇಳೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಕಾಡುಗೊಲ್ಲ ಸಮುದಾಯದ ಜನರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ತೊಂದರೆ ಉಂಟಾಗಿರುವ ಕುರಿತು ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗೂಳಿಹಟ್ಟಿ ಶೇಖರ್‌, ‘ಕಾಡುಗೊಲ್ಲ ಜಾತಿಯ ಪ್ರಮಾಣಪತ್ರ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಗೊಲ್ಲ ಜಾತಿಯ ಪ್ರಮಾಣಪತ್ರ ವಿತರಿಸುತ್ತಿದ್ದಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ’ ಎಂದರು.

‘ಶಾಲಾ ದಾಖಲಾತಿಯಲ್ಲಿ ಗೊಲ್ಲ ಸಮುದಾಯದ ಹೆಸರು ಬರೆಸಿ, ಈಗ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಕೇಳಿದರೆ ಕೊಡುವುದು ಕಷ್ಟ’ ಎಂದರು.

ಸೈನಿಕರಿಗೆ ವಂಚನೆ: ಕ್ರಮದ ಭರವಸೆ

ADVERTISEMENT

ಬೆಂಗಳೂರು: ಜಮೀನು ಕೊಡಿಸುವ ಭರವಸೆ ನೀಡಿ ಮಾಜಿ ಸೈನಿಕರಿಗೆ ವಂಚಿಸಿರುವ ಕುರಿತು ದೂರು ಸಲ್ಲಿಸಿದರೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ‘ವಿಕ್ರಂ ದತ್‌ ಹಾಗೂ ಮತ್ತೊಬ್ಬ ಮಾಜಿ ಸೈನಿಕರಿಂದ ಅಬ್ದುಲ್‌ ರಜಾಕ್‌ ಎಂಬಾತ ₹ 70 ಲಕ್ಷ ಪಡೆದು ವಂಚಿಸಿದ್ದಾನೆ. ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಸರಿನಲ್ಲಿ ಜಮೀನು ಮಂಜೂರಾತಿಯ ನಕಲಿ ಆದೇಶ ನೀಡಲಾಗಿದೆ. ವಂಚಿಸಿರುವ ವ್ಯಕ್ತಿ ಪ್ರಧಾನಿ ಸೇರಿದಂತೆ ಪ್ರಭಾವಿಗಳ ಜತೆ ಇರುವ ಫೋಟೊಗಳಿವೆ’ ಎಂದರು.

ವಂಚನೆಗೊಳಗಾದವರು ದೂರು ನೀಡಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.