ADVERTISEMENT

ಬಾರದ ಪಠ್ಯಪುಸ್ತಕ; ವಿದ್ಯಾರ್ಥಿಗಳ ಗೋಳು

ಆರಂಭವಾಗದ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ; ಕಲಿಕೆ ಮೇಲೆ ಪರಿಣಾಮ

ಬಸವರಾಜ ಸಂಪಳ್ಳಿ
Published 10 ಅಕ್ಟೋಬರ್ 2019, 19:33 IST
Last Updated 10 ಅಕ್ಟೋಬರ್ 2019, 19:33 IST
ಬೆಳಗಾವಿ ಜಿಲ್ಲೆಯ ನದಿಇಂಗಳಗಾಂವ ಗ್ರಾಮದಲ್ಲಿ ನೆರೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದಿದ್ದು, ಮಕ್ಕಳಿಗೆ ಶಾಲಾ ವರಾಂಡದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು
ಬೆಳಗಾವಿ ಜಿಲ್ಲೆಯ ನದಿಇಂಗಳಗಾಂವ ಗ್ರಾಮದಲ್ಲಿ ನೆರೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಗೋಡೆ ಕುಸಿದಿದ್ದು, ಮಕ್ಕಳಿಗೆ ಶಾಲಾ ವರಾಂಡದಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು   

ಹುಬ್ಬಳ್ಳಿ: ಮಳೆ ಮತ್ತು ನೆರೆಯಿಂದ ಉತ್ತರ ಕರ್ನಾಟಕದ ಎಂಟುಶೈಕ್ಷಣಿಕ ಜಿಲ್ಲೆಗಳಲ್ಲಿಮಕ್ಕಳ ಪುಸ್ತಕ, ಪಾಟಿಚೀಲಗಳೂ ಕೊಚ್ಚಿ ಹೋಗಿ ಎರಡು ತಿಂಗಳು ಕಳೆದರೂ ಹೊಸ ಪಠ್ಯಪುಸ್ತಕ ಲಭಿಸಿಲ್ಲ.

ಚಿಕ್ಕೋಡಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.ತರಗತಿಗಳಿಲ್ಲದೆ ಸಮುದಾಯ ಭವನ, ದೇವಸ್ಥಾನ, ಮರದಡಿ ಮಕ್ಕಳು ಕುಳಿತು ಕಲಿಯುತ್ತಿದ್ದಾರೆ. ಕೆಲವೆಡೆ ಮನೆಗಳಲ್ಲೇ ಬಾಡಿಗೆ ಆಧಾರದ ಮೇಲೆ ಶಾಲೆಗಳು ನಡೆಯುತ್ತಿದ್ದಾರೆ.ಕನ್ನಡ, ಮರಾಠಿ, ಉರ್ದು ಮಾಧ್ಯಮವೂ ಸೇರಿದಂತೆ 7,31,164 ಪಠ್ಯ ಪುಸ್ತಕಗಳು ನೀರು ಪಾಲಾಗಿವೆ. ಓದಲು ಪುಸ್ತಕಗಳಿಲ್ಲ, ಬರೆಯಲು ಕಾಪಿಗಳಿಲ್ಲ. ಆದರೂ ಅರ್ಧ ವಾರ್ಷಿಕ ಪರೀಕ್ಷೆಗಳನ್ನೂ ಬರೆದಿದ್ದಾರೆ.

‘ದೇವಸ್ಥಾನ, ಸಮುದಾಯಭವನಗಳಲ್ಲಿ ಮಕ್ಕಳಿಗೆ ಅಗತ್ಯ ಬೆಳಕು, ನೀರು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ’ ಎಂದು ನವಲಗುಂದ ತಾಲ್ಲೂಕಿನ ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು
‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಎಲ್ಲವೂ ಸುಸ್ಥಿತಿಗೆ ಬರಲುಎರಡು ಮೂರು ತಿಂಗಳು ಬೇಕಾಗಬಹುದು. ಆದರೆ, ಈ ನಡುವೆ ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಆಯೋಜಿಸಲು ಸರ್ಕಾರ ಮುಂದಾಗಿರುವುದು ಮಕ್ಕಳಲ್ಲಿ ಆತಂಕಕ್ಕೆ ಕಾರಣವಾಗಿದೆ’ ಎಂದರು.

15 ದಿನಗಳಲ್ಲಿ ಪೂರೈಕೆ: ‘ಪಠ್ಯಪುಸ್ತಕ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿ ಇದ್ದ ಹೆಚ್ಚುವರಿ ಪುಸ್ತಕಗಳನ್ನು ನೆರೆಪೀಡಿತ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಬೇಕಿರುವ ಪುಸ್ತಕಗಳನ್ನು ಮುದ್ರಿಸಲು ಈಗಾಗಲೇ ಕರ್ನಾಟಕ ಪಠ್ಯಪುಸ್ತಕ ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ. ಇನ್ನು 15 ದಿನಗಳಲ್ಲಿ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಪೂರೈಕೆಯಾಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ.ಜಗದೀಶ ತಿಳಿಸಿದರು.

ಡಿಸೆಂಬರ್‌ಗೆ ದುರಸ್ತಿ: ‘ಎನ್‌ಡಿಆರ್‌ಎಫ್‌ ಅನುದಾನದಲ್ಲಿ ಶಾಲಾ ಕೊಠಡಿಗಳ ದುರಸ್ತಿ‌ ಕೈಗೊಳ್ಳಲಾಗುತ್ತಿದೆ’ ಎಂದರು.

*
ಏಳನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ.
-ಕೆ.ಜಿ.ಜಗದೀಶ, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.