ADVERTISEMENT

ಸುಳ್ಳು ಹೇಳುವ ಅವತಾರ ಪುರುಷ: ಕೈಲಾಸ್‌ ಸತ್ಯಾರ್ಥಿ

ಸೈನ್ಸ್‌ ಗ್ಯಾಲರಿ ‘ವಿಜ್ಞಾನ ಪ್ರದರ್ಶನ’ದಲ್ಲಿ ಬೇಸರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 16:25 IST
Last Updated 24 ಆಗಸ್ಟ್ 2024, 16:25 IST
<div class="paragraphs"><p>ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸೈನ್ಸ್ ಗ್ಯಾಲರಿಯಲ್ಲಿ ಶನಿವಾರ ಆರಂಭವಾದ ‘ಎಸ್‌ಸಿಐ560’ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬರು ಬಾಲಕನಿಗೆ ಶಬ್ದ ತರಂಗಗಳ ಪರಿಣಾಮಗಳ ಪ್ರಾತ್ಯಕ್ಷಿಕೆ ನೀಡಿದರು </p></div>

ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸೈನ್ಸ್ ಗ್ಯಾಲರಿಯಲ್ಲಿ ಶನಿವಾರ ಆರಂಭವಾದ ‘ಎಸ್‌ಸಿಐ560’ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬರು ಬಾಲಕನಿಗೆ ಶಬ್ದ ತರಂಗಗಳ ಪರಿಣಾಮಗಳ ಪ್ರಾತ್ಯಕ್ಷಿಕೆ ನೀಡಿದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜನರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ತೀವ್ರವಾಗಿದೆ. ಈಚಿನ ವರ್ಷಗಳಲ್ಲಿ ಹುಟ್ಟಿಕೊಂಡಿರುವ ಅವತಾರ ಪುರುಷನೊಬ್ಬ ಬಡವರನ್ನು ಉದ್ಧಾರ ಮಾಡುತ್ತೇನೆ ಎನ್ನುತ್ತಾ, ಬರಿಯ ಸುಳ್ಳುಗಳನ್ನೇ ಹೇಳುತ್ತಾನೆ. ಜನ ಅದನ್ನು ನಂಬುತ್ತಾರೆ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್‌ ಸತ್ಯಾರ್ಥಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿಸದೇ ಲೇವಡಿ ಮಾಡಿದರು.

ADVERTISEMENT

ಸೈನ್ಸ್‌ ಗ್ಯಾಲರಿ ಬೆಂಗಳೂರು ಶನಿವಾರ ಆಯೋಜಿಸಿರುವ ‘ಎಸ್‌ಸಿಐ560’ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಜನರು ಈಗಲೂ ವೈದ್ಯರು ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳನ್ನು ನಂಬುವುದಿಲ್ಲ.  ಮೂಢನಂಬಿಕೆಗಳಿಗೇ ಆತುಕೊಳ್ಳುತ್ತಾರೆ. ಮನದ ಮಾತನಾಡುವ ಫಕೀರ ತಟ್ಟೆ ಬಡಿಯಿರಿ ಎಂದು ಹೇಳಿದ್ದನ್ನು ಹಲವು ಮುಖ್ಯಮಂತ್ರಿಗಳೂ, ಸಚಿವರೂ ತಲೆಮೇಲೆ ಹೊತ್ತುಕೊಂಡು ಮಾಡುತ್ತಾರೆ. ಇಂತಹ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಸೈನ್ಸ್‌ ಗ್ಯಾಲರಿಗೆ ₹ 10 ಕೋಟಿಗಳ ಮೂಲಧನದ ಚೆಕ್‌ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಅವರು ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆಗೆ ಹಸ್ತಾಂತರಿಸಿದರು.

ಸೈನ್ಸ್‌ ಗ್ಯಾಲರಿಯ ಆಡಳಿತ ಮಂಡಳಿ ಸದಸ್ಯರಾದ ರೋಹಿಣಿ ನಿಲೇಕಣಿ, ‘ಯಾವುದೇ ವಿಷಯವನ್ನು ವಿಜ್ಞಾನಿಗಳು, ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳು ಹೇಗೆ ನೋಡುತ್ತಾರೆ ಎಂಬುದನ್ನು ಪರಸ್ಪರ ಹಂಚಿಕೊಳ್ಳುವ ವೇದಿಕೆಯಾಗಿ ಸೈನ್ಸ್‌ ಗ್ಯಾಲರಿಯನ್ನು ರೂಪಿಸಲಾಗಿದೆ’ ಎಂದರು.

ಟಿಪ್ಪು ಕಾಲದ ರಾಕೆಟ್ ಪ್ರದರ್ಶನ

30 ಸಂಸ್ಥೆಗಳು ವಿವಿಧ ಪ್ರಯೋಗಗಳ ಪ್ರಾತಕ್ಷಿಕೆ ಛಾಯಾಚಿತ್ರ ‘ಎಸ್‌ಸಿಐ560’ಯಲ್ಲಿ ಪ್ರದರ್ಶನಕ್ಕೆ ಇರಿಸಿವೆ. ಇನ್ನೂ ಹಲವು ತಿಂಗಳು ವಾರಾಂತ್ಯದಲ್ಲಿ ಪ್ರದರ್ಶನ ಇರಲಿದೆ.

  • ಟಿಪ್ಪು ಸುಲ್ತಾನ್‌ ಅವಧಿಯಲ್ಲಿ ಅಭಿವೃದ್ಧಿಪಡಿಸಿದ ‘ರಾಕೆಟ್‌’ ಅನ್ನು ಬಳಸಿಕೊಂಡು ಬ್ರಿಟಿಷರು ರೂಪಿಸಿದ ‘ಬೆಂಗಳೂರು ಟಾರ್ಪೆಡೊ’ದ ಮಾದರಿಯನ್ನು ಭಾರತೀಯ ಸೇನೆಯ ಮದ್ರಾಸ್‌ ಎಂಜಿನಿಯರ್ ಗ್ರೂಪ್‌ ಪ್ರದರ್ಶಿಸಿದೆ.

  • ಕತ್ತಲ ಆಗಸ ನಕ್ಷತ್ರ ಪುಂಜಗಳನ್ನು ಪರದೆಯ ಮೇಲೆ ಸೃಷ್ಟಿಸುವ ‘ಅಫ್ಟೊ–ಮೆಕ್ಯಾನಿಕಲ್‌ ಪ್ರೊಜೆಕ್ಟರ್‌’ ಅನ್ನು ಜವಾಹರಲಾಲ್‌ ನೆಹರು ತಾರಾಲಯ ಪ್ರದರ್ಶಿಸಿದೆ. 1989ರಲ್ಲಿ ಜರ್ಮನಿಯಲ್ಲಿ ತಯಾರಾದ ಈ ಪ್ರೊಜೆಕ್ಟರ್‌ನ ಕೆಲವೇ ಮಾದರಿ ಉಳಿದಿವೆ.

  • ಬೆಂಗಳೂರಿನಲ್ಲಿ ಮದ್ಯ ತಯಾರಿಕೆ ಇತಿಹಾಸದ ಜತೆಗೆ ಟೀ–ಎಲೆ ಸಕ್ಕರೆ ಮತ್ತು ಕೆಲವು ಈಸ್ಟ್‌ಗಳನ್ನು ಬಳಸಿ ಮದ್ಯ ತಯಾರಿಸುವ ಬಗ್ಗೆ ಸ್ಕೋಬಿ ಲ್ಯಾಬ್‌ನಿಂದ ಪ್ರಾತ್ಯಕ್ಷಿಕೆ.

  • ಭಾರತದ ಮೊದಲ ತರಬೇತಿ ವಿಮಾನ ‘ಹಿಂದುಸ್ತಾನ್‌ ಟ್ರೈನರ್‌–10’ರ ವಿನ್ಯಾಸ ಅಭಿವೃದ್ಧಿ ಮತ್ತು ತಯಾರಿಕೆಯ ವಿವಿಧ ಹಂತಗಳನ್ನು ವಿವರಿಸುವ ಕಿರುಚಿತ್ರದ ಪ್ರದರ್ಶನ ಎಚ್‌ಎಎಲ್‌ನಿಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.