ADVERTISEMENT

ಕಾನನದಲ್ಲಿ ವಿಜ್ಞಾನ ಪಾಠ!

ಮಕ್ಕಳಲ್ಲಿ ಪ್ರಾಯೋಗಿಕ ಜ್ಞಾನ ಬೆಳೆಸಲು ಯುವ ಸಂಶೋಧಕರ ಪ್ರಯತ್ನ

ಸಂಧ್ಯಾ ಹೆಗಡೆ
Published 2 ಮೇ 2019, 19:23 IST
Last Updated 2 ಮೇ 2019, 19:23 IST
ಕ್ಷೇತ್ರ ಅಧ್ಯಯನದಲ್ಲಿ ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಇಮ್ರಾನ್ ಪಟೇಲ್
ಕ್ಷೇತ್ರ ಅಧ್ಯಯನದಲ್ಲಿ ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಇಮ್ರಾನ್ ಪಟೇಲ್   

ಶಿರಸಿ: ಪಠ್ಯದಲ್ಲಿ ಬರುವ ವಿಜ್ಞಾನ ಪಾಠಗಳನ್ನು ತರಗತಿ ಕೊಠಡಿಯಿಂದ ಹೊರ ತಂದು ಪರಿಸರದ ನಡುವೆ ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಸುವ ವಿಭಿನ್ನ ಪ್ರಯತ್ನವೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ದಿ ಹ್ಯುಮಾನಿಟಿ ಎಕ್ಸ್‌ಪ್ರೆಸ್ ಸಂಸ್ಥೆಯ ಸಂಸ್ಥಾಪಕರಾಗಿರುವ ಇಮ್ರಾನ್ ಪಟೇಲ್ ಹಾಗೂ ಜೀವಿವಿಜ್ಞಾನ ಶಿಕ್ಷಕ ವಿಷ್ಣುಪ್ರಿಯಾ ಹತ್ವಾರ್ ಅವರು, ಮಕ್ಕಳಿಗೆ ಪ್ರಾಯೋಗಿಕ ಕಲಿಕೆಯ ಸಾಹಸಕ್ಕೆ ಮುಂದಾಗಿ, ಯಶಸ್ಸು ಕಂಡಿದ್ದಾರೆ.

‘ವಿಜ್ಞಾನಿಗಳು ನಡೆಸುತ್ತಿರುವ ಅನೇಕ ಸಂಶೋಧನೆಗಳು ಜನರ ಬಳಿ ತಲುಪುತ್ತಿಲ್ಲ. ವೈಜ್ಞಾನಿಕ ಅಧ್ಯಯನಗಳನ್ನು ಅವರಿಗೆ ಅರ್ಥೈಸಿಕೊಳ್ಳಲು ಆಗುತ್ತಿಲ್ಲ. ಪ್ರಾಯೋಗಿಕ ಅಧ್ಯಯನದ ಕೊರತೆ ಇದಕ್ಕೆ ಮುಖ್ಯ ಕಾರಣ. ಕಲಿಕೆಯ ಹಂತದಲ್ಲೇ ಮಕ್ಕಳಿಗೆ ಈ ಜ್ಞಾನ ನೀಡಿದರೆ, ಭವಿಷ್ಯದಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುವ ಇವರಿಗೆ ಪರಿಸರ ಹೆಚ್ಚು ಅರ್ಥವಾಗುತ್ತದೆಯೆಂಬ ವಿಚಾರ ಬಂತು. ಹೀಗಾಗಿ, ಎರಡು ವರ್ಷಗಳ ಹಿಂದೆ ಅನುಭವಾಧಾರಿತ ಕಲಿಕಾ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಿದೆ’ ಎನ್ನುತ್ತಾರೆ ಅರಣ್ಯ ಪದವಿ ಪೂರೈಸಿ, ಪರಿಸರ ಸಂಬಂಧಿ ಸಂಶೋಧನೆಯಲ್ಲಿ ತೊಡಗಿರುವ ಯುವ ಉತ್ಸಾಹಿ ಇಮ್ರಾನ್.

ADVERTISEMENT

‘ವಿಜ್ಞಾನ ಪಠ್ಯಕ್ರಮವು, ಜಾಗತಿಕ ಹವಾಮಾನ ಬದಲಾವಣೆಯಿಂದ ಹಿಡಿದು ಪರಿಸರ ಚಕ್ರದವರೆಗಿನ ಎಲ್ಲ ಸಂಗತಿಗಳನ್ನು ವಿಸ್ತೃತವಾಗಿ ತಿಳಿಸುತ್ತದೆ. ಪಠ್ಯದಲ್ಲಿ ಮಕ್ಕಳು, ಬಾಷ್ಪೀಕರಣ, ಇಂಗಾಲದ ವಿನಿಮಯ, ಗಿಡಗಳ ಬೆಳವಣಿಗೆ, ದ್ಯುತಿ ಸಂಶ್ಲೇಷಣ ಕ್ರಿಯೆ, ಜೀವಿ ವರ್ಗೀಕರಣ ಎಲ್ಲವನ್ನೂ ಓದುತ್ತಾರೆ. ಆದರೆ, ಪದವಿ ಪಡೆದು ಸಂಶೋಧನೆಗೆ ತೊಡಗಿದಾಗ, ಮತ್ತೆ ಮೂಲ ವಿಜ್ಞಾನ ಪುಸ್ತಕ ತಡಕಾಡುತ್ತಾರೆ. ಇದನ್ನು ಗಮನಿಸಿ, 4ರಿಂದ 10ನೇ ತರಗತಿವರೆಗಿನ ಎಲ್ಲ ವಿಜ್ಞಾನ ಪುಸ್ತಕಗಳನ್ನು ಅಭ್ಯಾಸ ಮಾಡಿ, ಕಾರ್ಯಾಗಾರದ ಮಾದರಿ ತಯಾರಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ವಿಜ್ಞಾನವನ್ನು ಪುಸ್ತಕದಲ್ಲಿ ಮಾತ್ರ ನೋಡುತ್ತಿದ್ದ ಮಕ್ಕಳು, ವಿದ್ಯಾರ್ಥಿದೆಸೆಯಿಂದಲೇ ಪಠ್ಯದ ಪಾಠ ಮತ್ತು ಪರಿಸರದ ನಡುವೆ ಕೊಂಡಿ ಕಲ್ಪಿಸಲು ಯೋಚಿಸುತ್ತಾರೆ. ಕಾರ್ಬನ್‌ನಿಂದ ಪರಿಸರ ಮೇಲಾಗುವ ಪರಿಣಾಮ, ಮರಗಳು ಬೆಳೆಯುವ ವಿಧಾನ, ದ್ಯುತಿ ಸಂಶ್ಲೇಷಣ ಕ್ರಿಯೆಯ ಇಂತಹ ಅನೇಕ ಸಂಗತಿಗಳನ್ನು ಕ್ಷೇತ್ರಕ್ಕೆ ಬಂದು ತಿಳಿದುಕೊಳ್ಳುತ್ತಾರೆ. ಆ ಮೂಲಕ ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ’ ಎಂಬುದು ಅವರ ಅಭಿಪ್ರಾಯ.

‘120ಕ್ಕೂ ಹೆಚ್ಚು ಕಾರ್ಯಾಗಾರಗಳು ನಡೆದಿವೆ. ಮುಂಬೈ, ಪುಣೆ, ಬೆಂಗಳೂರು ಇನ್ನೂ ಅನೇಕ ಜಿಲ್ಲೆಗಳ 350ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.