ಮೂಡುಬಿದಿರೆ: ಅತ್ತಿಂದಿತ್ತ ತೂಗಾಡುತ್ತಿದ್ದ ಕೋತಿ–ಸೇತುವೆ (ಮಂಕಿ ಬ್ರಿಜ್) ಮೇಲೆ ವಿದ್ಯಾರ್ಥಿಗಳುಎಚ್ಚರಿಕೆಯಿಂದ ಹೆಜ್ಜೆ ಹಾಕಿದರು, ಹಗ್ಗಗಳನ್ನು ಪೋಣಿಸಿ ನಿರ್ಮಿಸಿದ್ದ ರಷ್ಯನ್ ಗೋಡೆಯನ್ನು ಛಲ ಬಿಡದೆ ಹತ್ತಿದರು. ಓಲಾಡುವ ಏಣಿಯಲ್ಲೂ ಸಮತೋಲನ ಕಾಯ್ದುಕೊಂಡು ಮೇಲಕ್ಕೇರಿದರು. ಟೈರ್‌ಗಳಿಂದ ನಿರ್ಮಿಸಿದ್ದ ಗೋಡೆಯನ್ನು ಚಕಚಕನೇ ಹತ್ತಿ ಆಗಸದತ್ತ ಮುಷ್ಟಿ ಬೀಸಿದರು...
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಅಂಗವಾಗಿ ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾಂಗಣದಲ್ಲಿ ರೂಪಿಸಿರುವ ‘ಸವಾಲಿನ ಕಣಿವೆ’ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಾಹಸ ಕಸರತ್ತುಗಳು ಒಂದಕ್ಕಿಂತ ಒಂದು ರೋಚಕ. ಬಲೆಯಲ್ಲಿ ನಡಿಗೆ, ಬಲೆಯೊಳಗೆ ನುಸುಳುವಿಕೆ, ಸ್ಕೈ–ಸೈಕ್ಲಿಂಗ್, ಟೈರ್‌ಗಳಿಂದ ನಿರ್ಮಿಸಿದ ಗುಹೆಯೊಳಗೆ ನುಸುಳುವಿಕೆ, ತೂಗುಹಾಕಿದ ಟೈರ್‌ಗಳಲ್ಲಿ ನೇತಾಡುತ್ತಾ ಸಾಗುವುದು, ನಾಲ್ಕು ಕಂಬಗಳ ಅಟ್ಟಳಿಗೆಯಲ್ಲಿ ಆಗಸದೆತ್ತರಕ್ಕೆ ಏರುವುದು... ದೇಹವನ್ನು ದಂಡಿಸುವ, ರೋಮಾಂಚನಕಾರಿ ಅನುಭವ ನೀಡುವ ಈ ಕಸರತ್ತುಗಳು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಎಂದೂ ಮರೆಲಾರದ ಅನುಭವದ ಬುತ್ತಿಯನ್ನುಕಟ್ಟಿಕೊಟ್ಟವು.
10 ಸಾವಿರ ಮಂದಿಯಿಂದ ಸಾಹಸ
ಜಾಂಬೂರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಕಸರತ್ತುಗಳು ಆರಂಭವಾದ ಮೊದಲ ದಿನವೇ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಾಹಸಮಯ ಕಸರತ್ತುಗಳಲ್ಲಿ ಭಾಗವಹಿಸಿದರು. ಇದೇ 26ರ ವರೆಗೆ ನಿತ್ಯ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಈ ಕಸರತ್ತುಗಳು ಸತತವಾಗಿ ನಡೆಯುತ್ತಿರುತ್ತವೆ.
****
ಬೆಳಿಗ್ಗೆ ಸುರತ್ಕಲ್ ಕಡಲಕಿನಾರೆಯಲ್ಲಿ ವಿಹಾರಕ್ಕೆ ಅವಕಾಶವಿತ್ತು. ಸಂಜೆ ಇಲ್ಲಿ ಸಾಹಸ ಕಸರತ್ತುಗಳಲ್ಲಿ ಭಾಗವಹಿಸುವ ಯೋಗ.
-ಯಶೋಧರ ಎಚ್.,ಶಿಕ್ಷಕ, ಸಾಗರ
****
ಜಾಂಬೂರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ವೈವಿಧ್ಯ, ಉಪಚಾರ ಎಲ್ಲವೂ ಚೆನ್ನಾಗಿದೆ. ನಾವಂತೂ ತುಂಬಾ ಸಂಭ್ರಮಿಸುತ್ತಿದ್ದೇವೆ.
-ಶ್ರಾವ್ಯ, ಗೈಡ್ಸ್ ವಿದ್ಯಾರ್ಥಿನಿ
****
ಸಾಹಸ ಕ್ರೀಡೆಗಳಿಂದ ಬಹಳಷ್ಟನ್ನು ಕಲಿತೆವು. ಛಲ, ಹುಮ್ಮಸ್ಸು ಇಮ್ಮಡಿಯಾಯಿತು. ಈ ಅವಕಾಶ ಮತ್ತೆ ಸಿಗದು
-ಸಿಯಾನ್, ಗೈಡ್ಸ್ ವಿದ್ಯಾರ್ಥಿನಿ
****
1997ರಿಂದ ಸ್ಕೌಟ್ಸ್‌ನ ಅನೇಕ ಜಾಂಬೂರಿಗಳಲ್ಲಿ ಭಾಗವಹಿಸಿದ್ದೇನೆ. ಈ ಜಾಂಬೂರಿ ನಿಸರ್ಗದ ಮಡಿಲಿನಲ್ಲಿ ತುಂಬಾ ಅಚ್ಚುಕಟ್ಟಾಗಿ ಆಯೋಜನೆಗೊಂಡಿದೆ.
-ಅಪೇಕ್ಷ್, ಸ್ಕೌಟ್ಸ್ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.