ADVERTISEMENT

‘ಶಕ್ತಿ’ಗೆ ಪರಿಶಿಷ್ಟರ ನಿಧಿ ಬಳಕೆ: ಸಮಿತಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:45 IST
Last Updated 25 ಜುಲೈ 2024, 15:45 IST
   

ಬೆಂಗಳೂರು: ಪರಿಶಿಷ್ಟ ಜಾತಿಗಳ ಉಪ ಯೋಜನೆ (ಎಸ್‌ಸಿಎಸ್‌ಪಿ), ಪರಿಶಿಷ್ಟ ಪಂಗಡಗಳ ಯೋಜನೆ (ಟಿಎಸ್‌ಪಿ) ನಿಧಿಯನ್ನು ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಲು ಬಳಕೆ ಮಾಡುತ್ತಿರುವುದಕ್ಕೆ ‘ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ’ ಆಕ್ಷೇಪ ವ್ಯಕ್ತಪಡಿಸಿದೆ.

ಉಭಯ ಸದನಗಳಲ್ಲಿ ಗುರುವಾರ ಮಂಡಿಸಿದ ಸಮಿತಿಯ ಮೂರನೇ ವರದಿಯಲ್ಲಿ ಈ ಆಕ್ಷೇಪ ಇದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ದಶಕದಿಂದ ಅಸ್ತಿತ್ವದಲ್ಲಿದೆ. ಶಕ್ತಿ ಯೋಜನೆ ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಎಲ್ಲ ಜಾತಿ, ಧರ್ಮದ ಮಹಿಳೆಯರೂ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಉಚಿತ ಬಸ್‌ಪಾಸ್‌ ಸಹ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ. ಹಾಗಾಗಿ, ಎಲ್ಲ ವರ್ಗದವರಿಗೂ ನೀಡಿದಂತೆ ಈ ಯೊಜನೆಯ ಸವಲತ್ತುಗಳನ್ನು ಪರಿಶಿಷ್ಟರಿಗೂ ನೀಡಬೇಕು. ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿ ಬಳಸಬಾರದು ಎಂದು ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ.

ADVERTISEMENT

ಖರ್ಚಾಗದೆ ಉಳಿದ ಹಣ ₹985 ಕೋಟಿ:

ಸಮಾಜ ಕಲ್ಯಾಣ ಇಲಾಖೆಯ ಅಧೀನದ ಆರು ನಿಗಮಗಳಿಗೆ ನೀಡಿದ್ದ ಅನುದಾನದಲ್ಲಿ 2023–24ನೇ ಸಾಲಿನ ಅಂತ್ಯಕ್ಕೆ ಖರ್ಚಾಗದೇ ಉಳಿದ ಹಣ  ₹985 ಕೋಟಿ. ಈ ಎಲ್ಲ ಹಣ ಆಯಾ ನಿಗಮಗಳ ವೈಯಕ್ತಿಕ ಖಾತೆಯಲ್ಲಿ (ಪಿ.ಡಿ) ಇವೆ. ಸಮಾಜಕಲ್ಯಾಣ ಇಲಾಖೆಗೆ ಒದಗಿಸಲಾದ ಅನುದಾನವನ್ನು ನಿಗಮಗಳ ಪಿಡಿ ಇಟ್ಟಿರುವುದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ, ಈ ಹಣವನ್ನು ಬಳಸಿಕೊಂಡು ಘೋಷಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದೆ.

ಆಂತರಿಕ ಲೆಕ್ಕಪರಿಶೋಧನಾ ಸಮಿತಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿನ ₹74 ಕೋಟಿ ಅವ್ಯವಹಾರ ಪತ್ತೆ ಮಾಡಿರುವುದನ್ನು ಉಲ್ಲೇಖಿಸಿದೆ. ಸಿಐಡಿ ತನಿಖೆ ನಡೆಯುತ್ತಿರುವಾಗಲೇ ತನಿಖಾಧಿಕಾರಿಯನ್ನು ಬದಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದೆ. 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವ ವಸತಿ ಶಾಲೆಗಳ ನಿರ್ವಹಣೆ, ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸುವಂತೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.