ADVERTISEMENT

SCSP, TSP: ₹39,121 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅಭಿವೃದ್ಧಿ ಪರಿಷತ್ ಅಸ್ತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 9:41 IST
Last Updated 5 ಜುಲೈ 2024, 9:41 IST
   

ಬೆಂಗಳೂರು: 2024-25ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ ಸಿ ಎಸ್ ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿ ಎಸ್ ಪಿ) ಅಡಿಯಲ್ಲಿ ₹39,121.46 ಕೋಟಿ ವೆಚ್ಚ ಮಾಡುವ ಪ್ರಸ್ತಾವವುಳ್ಳ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ.

ಪರಿಷತ್ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತು ಪರಿಷತ್ ಸದಸ್ಯರಾಗಿರುವ ಶಾಸಕರು ಸಭೆಯಲ್ಲಿದ್ದರು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ಎಸ್‌ಸಿಎಸ್‌ಪಿ ಅಡಿಯಲ್ಲಿ ₹ 27,673.96 ಕೋಟಿ ಮತ್ತು ಟಿಎಸ್‌ಪಿ ಅಡಿಯಲ್ಲಿ ₹ 11,447.51 ಕೋಟಿ ವೆಚ್ಚ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ₹ 3,900 ಕೋಟಿಯಷ್ಟು ಹೆಚ್ಚಿನ ವೆಚ್ಚ ಮಾಡಲಾಗುತ್ತದೆ' ಎಂದು ವಿವರ ನೀಡಿದರು.

ADVERTISEMENT

ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು ₹ 91 ಕೋಟಿ ಒದಗಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ತರಬೇತಿ ಪಡೆಯಲು ದೆಹಲಿಗೆ ಹೋಗುವ ಈ ಸಮುದಾಯಗಳ ಅಭ್ಯರ್ಥಿಗಳಿಗೆ ನೀಡುತ್ತಿದ್ದ ಮಾಸಿಕ ಪ್ರೋತ್ಸಾಹಧನವನ್ನು ₹ 10,000ದಿಂದ ₹ 15,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಅಭ್ಯರ್ಥಿಗಳಿಗಾಗಿ ದೆಹಲಿಯಲ್ಲೇ ಒಂದು ವಸತಿ ನಿಲಯ ನಿರ್ಮಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಗ್ಯಾರಂಟಿಗಳಿಗೆ ₹ 14,282 ಕೋಟಿ: ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ₹ 14,282 ಕೋಟಿಯನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ವೆಚ್ಚ ಮಾಡಲಾಗುವುದು ಎಂದರು.

ಗ್ಯಾರಂಟಿಗಳಿಗೆ ಪರಿಶಿಷ್ಟರಿಗೆ ಮೀಸಲಾದ ಅನುದಾನ ಬಳಕೆಯನ್ನು ಬಿಜೆಪಿ ವಿರೋಧಿಸಿದ ಕುರಿತು ಕೇಳಿದಾಗ, 'ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಇಂತಹ ಕಾಯ್ದೆ ಇದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮೊದಲು ಈ ಕಾಯ್ದೆ ತರಲಿ' ಎಂದರು.

ಕಾಯ್ದೆ ಜಾರಿಯಾಗಿ ಹತ್ತು ವರ್ಷಗಳಾಗಿದೆ. ಈ ಅವಧಿಯಲ್ಲಿ ಪರಿಶಿಷ್ಟರಿಗೆ ಶೇಕಡ 65ರಷ್ಟು ಅನುಕೂಲವಾಗಿದೆ ಎಂಬ ವರದಿ ಸಮೀಕ್ಷೆಯಲ್ಲಿ ಬಂದಿದೆ. ಮುಂದೆ ಪ್ರತಿ ಕುಟುಂಬವನ್ನೂ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಪ್ರಸ್ತಾವವಿದೆ ಎಂದು ತಿಳಿಸಿದರು.

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆಯಲ್ಲಿ ಲೊಪ ಎಸಗುವವರು, ಅನುದಾನ ಬಳಸದೇ ಉಳಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.