ಬೆಂಗಳೂರು: ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ನಿಯಮಗಳಡಿಯೇ ಪರಿಶಿಷ್ಟರ ಬದುಕಿಗೆ ‘ಗ್ಯಾರಂಟಿ’ ಸೌಲಭ್ಯಗಳನ್ನು ನೀಡಲಾಗಿದೆಯೇ ಹೊರತು, ಎಲ್ಲೂ ಕಾಯ್ದೆಯನ್ನು ಸರ್ಕಾರ ಉಲ್ಲಂಘಿಸಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
‘ಪ್ರಜಾವಾಣಿ’ಯ ಭಾನುವಾರದ (ಜುಲೈ 14) ಸಂಚಿಕೆಯಲ್ಲಿ ಪ್ರಕಟವಾದ ‘ಪರಿಶಿಷ್ಟರ ನಿಧಿಗೆ ಕನ್ನ!’ ವರದಿಗೆ ಪ್ರತಿಕ್ರಿಯಿಸಿರುವ ಅವರು, ‘ಕೆಳಸಮುದಾಯಗಳ ಹಣವನ್ನು ಸಿ.ಎಂ ಅವರಾಗಲಿ, ನಾನಾಗಲೀ ಸ್ವಂತಕ್ಕೆ ಬಳಸಿಕೊಂಡಿಲ್ಲ. ಸ್ವಾರ್ಥ, ದುರುದ್ದೇಶದಿಂದ ಬಳಸಿಕೊಂಡಾಗ ಮಾತ್ರವೇ ‘ಕನ್ನ’ ಎನಿಸಿಕೊಳ್ಳುವುದೇ ವಿನಾ, ಪರಿಶಿಷ್ಟ ಸಮುದಾಯದ ಬದುಕಿಗೆ ಹಂಚಿಕೆ ಮಾಡಿದಾಗ ಅದು ಸಹಾಯ ಎನಿಸಿಕೊಳ್ಳುತ್ತದೆ’ ಎಂದಿದ್ದಾರೆ.
‘ಈ ಕಾಯ್ದೆಯನ್ನು ಇತಿಹಾಸದಲ್ಲೇ ಜಾರಿ ಮಾಡಿದ ಯಾವುದಾದರೂ ಸರ್ಕಾರವಿದ್ದರೆ, ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಕಾಯ್ದೆಯ 7 ‘ಡಿ’ ಸೆಕ್ಷನ್ ಬಗ್ಗೆ ತಕರಾರು ಎತ್ತಿದ್ದ ಬಿಜೆಪಿಗರು, ತಾವು ಅಧಿಕಾರದಲ್ಲಿದ್ದ ಅದನ್ನು ರದ್ದು ಮಾಡದೆ, ಇತರೆ ಇಲಾಖೆಗಳಿಗೆ ಹಣ ಹಂಚಿಕೆ ಮಾಡಿದ್ದರು. ನಮ್ಮ ಸರ್ಕಾರ ಸೆಕ್ಷನ್ 7 ‘ಡಿ’ ರದ್ದು ಮಾಡಿದೆ’ ಎಂದಿದ್ದಾರೆ.
‘ಗ್ಯಾರಂಟಿ’ಗಳ ಜಾರಿ ವಿಷಯದಲ್ಲಿಯೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಮೊತ್ತದ ಶೇ 24ರಷ್ಟನ್ನು ಅದೇ ಸಮುದಾಯದ ಜನರ ಬದುಕಿಗೆ ನೀಡಲಾಗಿದೆ. ನಮ್ಮಿಂದ ಯಾವ ಕಾರಣಕ್ಕೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯ ಆಗಿಲ್ಲ. ಆಗುವುದೂ ಇಲ್ಲ’ ಎಂದಿದ್ದಾರೆ.
ಬೆಂಗಳೂರು: ‘ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಈ ಬಾರಿಯ ತನ್ನ ಆಡಳಿತದಲ್ಲಿ (ಮಹಮದ್ ಘಜನಿಯ ಮಾದರಿ) ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ ₹ 25396 ಕೋಟಿಯನ್ನು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿದೆ. ಇದು ಸಾಮಾಜಿಕ ನ್ಯಾಯ ವ್ಯವಸ್ಥೆಯ ಮೂಲೋದ್ದೇಶದ ಅಸ್ತಿತ್ವವನ್ನು ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
‘ಪರಿಶಿಷ್ಟರ ‘ನಿಧಿ’ಗೆ ಕಾಂಗ್ರೆಸ್ ಕನ್ನ’ ವರದಿಯನ್ನು ‘X’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಸದ್ಯ ಈಗಾಗಲೇ ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಹೊಡೆದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇದ್ದ ಹಣವನ್ನೆಲ್ಲ ಅನ್ಯಕಾರ್ಯಗಳಿಗೆ ಬಳಸಿ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ‘ಇತಿ ಶ್ರೀ’ ಹಾಡಲು ಹೊರಟಿದೆ. ಈ ಕ್ರಮವನ್ನು ಬಿಜೆಪಿ ಸಹಿಸುವ ಮಾತೇ ಇಲ್ಲ. ದಲಿತ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಡುವ ಸಂಕಲ್ಪ ತೊಟ್ಟಿದ್ದೇವೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.