ADVERTISEMENT

ಧರ್ಮೇಗೌಡ ಆತ್ಮಹತ್ಯೆಗೆ ಕಾರಣಗಳ ಹುಡುಕಾಟ; ತನಿಖೆ ಶುರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 20:48 IST
Last Updated 30 ಡಿಸೆಂಬರ್ 2020, 20:48 IST
ಚಿಕ್ಕಮಗಳೂರು ತಾಲ್ಲೂಕಿನ ಸರಪನಹಳ್ಳಿ ಬಳಿಯ ತೋಟದಲ್ಲಿ ಮನೆ ನಿರ್ಮಾಣಕ್ಕೆ ಧರ್ಮೇಗೌಡ ಅವರು ಕುಟುಂಬ ಸಮೇತರಾಗಿ ಭೂಮಿ ಪೂಜೆ ನೆರವೇರಿಸಿದ್ದರು.
ಚಿಕ್ಕಮಗಳೂರು ತಾಲ್ಲೂಕಿನ ಸರಪನಹಳ್ಳಿ ಬಳಿಯ ತೋಟದಲ್ಲಿ ಮನೆ ನಿರ್ಮಾಣಕ್ಕೆ ಧರ್ಮೇಗೌಡ ಅವರು ಕುಟುಂಬ ಸಮೇತರಾಗಿ ಭೂಮಿ ಪೂಜೆ ನೆರವೇರಿಸಿದ್ದರು.   

ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ಆತ್ಮಹತ್ಯೆಗೆ ವಿಧಾನ ಪರಿಷತ್‌ನಲ್ಲಿ ಈಚೆಗೆ ನಡೆದ ಗಲಾಟೆ, ಎಳೆದಾಟದ ಘಟನೆಯಷ್ಟೇ ಅಲ್ಲ, ಬೇರೆ ಕಾರಣಗಳು ಇರಬಹುದು ಎಂಬ ಮಾತುಗಳು ಕೇಳಿಬಂದಿವೆ. ‌

ಧರ್ಮೇಗೌಡ ಅವರು ಪರಮಾಪ್ತರ ಬಳಿ ನೋವು ಹಂಚಿಕೊಂಡಿದ್ದರು ಎಂಬ ಚರ್ಚೆಗಳು ಶುರುವಾಗಿವೆ. ಕುಟುಂಬದಲ್ಲಿ ಏನಾದರೂ ಮನಸ್ತಾಪಗಳು ಇದ್ದವೇ ಎಂಬ ಪ್ರಶ್ನೆಗಳೂ ಎದ್ದಿವೆ. ‘ಡೆತ್‌ ನೋಟ್‌’ನಲ್ಲಿ ಏನಿದೆ ಎಂಬು ದರತ್ತ ಗಮನ ನೆಟ್ಟಿದೆ.

‘ಧರ್ಮೇಗೌಡ ಅವರು ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿ (ಗ್ರಾಮಾಂತರ ಠಾಣೆ ಬಳಿ) ಈಚೆಗೆ ಮನೆಯೊಂದನ್ನು ಖರೀದಿಸಿದ್ದರು. ತೋಟದ ಮನೆ ಆವರಣದಲ್ಲಿ ಮತ್ತೊಂದು ಮನೆ ನಿರ್ಮಿಸಲು ಸೋಮವಾರ (ಇದೇ 28) ಭೂಮಿಪೂಜೆ ನೆರವೇರಿಸಿದ್ದರು. ಪತ್ನಿ ಮಮತಾ, ಪುತ್ರ ಎಸ್‌.ಡಿ.ಸೋನಲ್‌ ಜತೆಗಿದ್ದರು’ ಎಂದು ಅವರ ಆಪ‍್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತನಿಖೆಗೆ ತಂಡ ರಚನೆ: ಧರ್ಮೇಗೌಡರ ಮೃತದೇಹ ಪತ್ತೆಯಾದ ಸ್ಥಳ ಹಾಗೂ ಸಖರಾಯಪಟ್ಟಣಕ್ಕೆ ರೈಲ್ವೆ ಪೊಲೀಸರು ಬುಧವಾರ ತೆರಳಿ ಪರಿಶೀಲನೆ ಮಾಡಿದ್ದಾರೆ.

‘ತನಿಖೆಗೆ ತಂಡ ರಚಿಸಲಾಗಿದೆ. ತನಿಖೆ ಹಂತದಲ್ಲಿರುವುದರಿಂದ ‘ಡೆತ್‌ ನೋಟ್‌’ನಲ್ಲಿ ಏನಿದೆ ಎಂದು ಈಗ ಬಹಿರಂಗಪಡಿಸಲು ಸಾಧ್ಯ ಇಲ್ಲ. ತನಿಖೆ ಮುಗಿದ ನಂತರ ವಿವರಿಸಲಾಗುವುದು’ ಎಂದು ಬೆಂಗಳೂರಿನ ರೈಲ್ವೆ ಪೊಲೀಸ್‌ ವಿಭಾಗದ ಡಿವೈಎಸ್ಪಿ ಡಿ. ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉನ್ನತ ಮಟ್ಟದ ತನಿಖೆ ಅಗತ್ಯ: ಓಂ ಬಿರ್ಲಾ
ನವದೆಹಲಿ:
ವಿಧಾನಪರಿಷತ್‌ ಉಪ ಸಭಾಪತಿಯಾಗಿದ್ದ ಎಸ್‌.ಎಲ್‌.ಧರ್ಮೇಗೌಡ ಅವರ ಸಾವಿನ ಕುರಿತು ಸ್ವತಂತ್ರ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಬುಧವಾರ ಹೇಳಿದ್ದಾರೆ.

‘ಧರ್ಮೇಗೌಡ ಅವರು ಪೀಠದಲ್ಲಿ ಇರುವಾಗ ಮೇಲ್ಮನೆಯಲ್ಲಿ ನಡೆದ ಘಟನೆಯು, ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಅವರ ಸಾವಿನ ಕುರಿತು ಸ್ವತಂತ್ರ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ಅಗತ್ಯ’ ಎಂದಿದ್ದಾರೆ.

‘ಶಾಸನ ಸಭೆಗಳ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.