ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ‘ಸೀಟ್ ಬ್ಲಾಕಿಂಗ್’ ಅಕ್ರಮ ನಡೆದಿರುವ ಬಗೆಗಿನ ಮಾಹಿತಿ ಕಲೆ ಹಾಕಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಅದಕ್ಕೆ ಸಂಬಂಧಿಸಿದ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಶೀಘ್ರ ಸಲ್ಲಿಸಲಿದೆ.
ಪ್ರಮುಖ ಕಾಲೇಜುಗಳಲ್ಲಿ ಬೇಡಿಕೆ ಇರುವ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾಗಿದ್ದರೂ, ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಟಿಸ್ ನೀಡಿತ್ತು.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಿಇಟಿಯಲ್ಲಿ ಉನ್ನತ ರ್‍ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜಿಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ ಎಂದು ಕೆಇಎ ದೂರಿತ್ತು.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೀಟ್ ಬ್ಲಾಕಿಂಗ್ ಕುರಿತು ವಿಸ್ತೃತ ಚರ್ಚೆ ಮಾಡಲಾಗಿತ್ತು. ಪ್ರಮುಖ ಕಾಲೇಜುಗಳಲ್ಲಿನ ಒಟ್ಟು ಸೀಟುಗಳು, ಬೇಡಿಕೆ ಇರುವ ಕೋರ್ಸ್‌ಗಳಲ್ಲಿ ಉಳಿಕೆಯಾದ ಸೀಟುಗಳು, ಪ್ರವೇಶ ಪಡೆಯದ ವಿದ್ಯಾರ್ಥಿಗಳ ವಿವರ, ನೋಟಿಸ್‌ಗೆ ಅವರು ನೀಡಿದ ಉತ್ತರವನ್ನು ಒಳಗೊಂಡ ಸಂಪೂರ್ಣ ಮಾಹಿತಿ ಇರುವ ವರದಿಯನ್ನು ಕೆಇಎ ಸಿದ್ಧಪಡಿಸಿದೆ.
‘ಉನ್ನತ ಶಿಕ್ಷಣ ಸಚಿವ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸೂಚನೆಯಂತೆ ಮಾಹಿತಿ ಸಿದ್ಧಪಡಿಸಲಾಗಿದೆ. ಹಲವು ವಿದ್ಯಾರ್ಥಿಗಳು ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಇನ್ನಷ್ಟು ಉತ್ತರಗಳನ್ನು ಸಂಗ್ರಹಿಸಿ ಒಂದರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.