ADVERTISEMENT

ಸೀಟ್‌ ಬ್ಲಾಕಿಂಗ್‌ | ಕಾಲೇಜುಗಳಿಗೆ ನೋಟಿಸ್‌: ಕೆಇಎ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:37 IST
Last Updated 7 ನವೆಂಬರ್ 2024, 15:37 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ಪ್ರಕರಣದಲ್ಲಿ ಕಾಲೇಜುಗಳಿಗೆ ನೋಟಿಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ.

‘ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಏಕೆ ಪ್ರವೇಶ ಪಡೆದಿಲ್ಲ’ ಎಂದು ಪ್ರಶ್ನಿಸಿ ಕೆಇಎ ನೀಡಿದ್ದ ನೋಟಿಸ್‌ಗೆ ಶೇ 80ರಷ್ಟು ವಿದ್ಯಾರ್ಥಿಗಳು ‘ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ಉತ್ತರಿಸಿದ್ದಾರೆ. ಹಾಗಾಗಿ, ಸಿಇಟಿ ಮೂಲಕ ಹಂಚಿಕೆಯಾದ ಬೇಡಿಕೆ ಇರುವ ಕೋರ್ಸ್‌ಗಳ ಸೀಟುಗಳು ಅಧಿಕ ಸಂಖ್ಯೆಯಲ್ಲಿ ಉಳಿದಿರುವ ಕಾಲೇಜುಗಳಿಗೆ ವಿವರಣೆ ಕೇಳಿ ನೋಟಿಸ್‌ ನೀಡಲಾಗುತ್ತಿದೆ.

ADVERTISEMENT

ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಪ್ರಮುಖ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ ಎಂದು ಕೆಇಎ ದೂರಿತ್ತು. ‘ಸೀಟ್‌ ಬ್ಲಾಕಿಂಗ್’ ಅಕ್ರಮ ನಡೆದಿರುವ ಶಂಕೆಯ ಮೇಲೆ 2,348 ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಿತ್ತು. 

‘ಜೆಇಇ, ಕಾಮೆಡ್‌–ಕೆ ಮತ್ತು ಇತರ ಅರ್ಹತಾ ಪರೀಕ್ಷೆಗಳತ್ತ ಚಿತ್ತ ಹರಿಸಿದ್ದರಿಂದ ಸಿಇಟಿ ಸೀಟು ಹಂಚಿಕೆಯ ಬಗ್ಗೆ ಗಮನಿಸಲಿಲ್ಲ. ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ವಿದ್ಯಾರ್ಥಿಗಳು ನೀಡಿದ ಉತ್ತರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೆಇಎ, ಅಕ್ರಮದಲ್ಲಿ ಆಯಾ ಕಾಲೇಜುಗಳೇ ಭಾಗಿಯಾಗಿರುವ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದೆ. 

‘ತಮ್ಮ ಫೋನ್‌ ಸಂಖ್ಯೆ, ಲಾಗಿನ್‌ ಐಡಿ-ಪಾಸ್‌ವರ್ಡ್‌ಗಳನ್ನು ದುರುಪಯೋಗ ಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ನೀಡಿದ ಉತ್ತರವನ್ನು ಮರುಪರಿಶೀಲನೆಗೆ ಒಳಪಡಿಸಿದೆವು. ಅವರ ಹೇಳಿಕೆಗಳಲ್ಲಿ ಸತ್ಯಾಂಶವಿದೆ ಎನ್ನುವುದು ಮನವರಿಕೆಯಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.  

ಕಾಲೇಜು ಆಡಳಿತ ಮಂಡಳಿಗಳು, ಇಂಟಿಗ್ರೇಟೆಡ್‌ ಕೋಚಿಂಗ್‌ ಸೆಂಟರ್‌ಗಳ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ಉನ್ನತ ತನಿಖೆ ನಡೆಸುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ಕೆಇಎ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.