ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇದೇ 15 ರಂದು (ಸೋಮವಾರ) ಪ್ರಕಟಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.
ಸೋಮವಾರ ಬೆಳಿಗ್ಗೆ 11 ಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ಗೆ(www.pue.kar.nic.in) ಫಲಿತಾಂಶ ಅಪ್‌ಲೋಡ್ ಮಾಡಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.
ಮಂಗಳವಾರ (ಏ.16) ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ನೋಟಿಸ್ ಬೋರ್ಡ್‌ಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಮಾರ್ಚ್ 1 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಿತು. ಮಾರ್ಚ್ 23 ರಿಂದ ಮೌಲ್ಯಮಾಪನ ಆರಂಭವಾಗಿ ಕಳೆದ ವಾರಾಂತ್ಯದಲ್ಲಿ ಮುಗಿದಿತ್ತು.
ಈ ಬಾರಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ನಂತರ ಅಂಕಗಳನ್ನು ಆನ್‌ಲೈನ್ ಮೂಲಕ ಸರ್ವರ್‌ಗೆ ಅಪ್‌ಲೋಡ್ ಮಾಡಿದ್ದರಿಂದ ಬೇಗನೆ ಫಲಿತಾಂಶ ನೀಡಲು ಸಾಧ್ಯವಾಗಿದೆ. ಸಾಮಾನ್ಯವಾಗಿ ಸಿಇಟಿ ಪರೀಕ್ಷೆಯ ಬಳಿಕ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿತ್ತು.
results.nic.in, examresults.net ವೆಬ್‌ಸೈಟ್‌ಗಳಲ್ಲಿಯೂ ಫಲಿತಾಂಶವನ್ನು ನೋಡಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.