ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಮೂರು ಪರೀಕ್ಷೆಗಳ ಕ್ರೋಡೀಕೃತ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶನಿವಾರ ಬಿಡುಗಡೆ ಮಾಡಿದೆ. ಶೇ 84.87 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದೇ ಮೊದಲ ಬಾರಿಗೆ ವಾರ್ಷಿಕ ಮೂರು ಪರೀಕ್ಷೆಗಳು ನಡೆದಿದ್ದವು.
2023ನೇ ಸಾಲಿನ ಫಲಿತಾಂಶಕ್ಕೆ (ಶೇ 74.67) ಹೋಲಿಸಿದರೆ, ಮೂರೂ ಪರೀಕ್ಷೆಗಳ ಕ್ರೋಡೀಕೃತ ಫಲಿತಾಂಶದಲ್ಲಿ ಶೇ 10.2ರಷ್ಟು ಏರಿದೆ. 2022ರಲ್ಲಿ ಶೇ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಅದೇ ರೀತಿ, 2024ರ ದ್ವಿತೀಯ ಪಿಯು ಪರೀಕ್ಷೆ-1ರ ಫಲಿತಾಂಶಕ್ಕೆ (ಶೇ 81.15) ಹೋಲಿಸಿದರೆ ಕ್ರೋಡೀಕೃತ ಫಲಿತಾಂಶದಲ್ಲಿ ಶೇ 3.72 ಏರಿಕೆ ಆಗಿದೆ.
ಗಣಿತ ವಿಜ್ಞಾನದಲ್ಲಿ 7,378 ಮತ್ತು ಜೀವ ವಿಜ್ಞಾನದಲ್ಲಿ 5,959, ಕನ್ನಡದಲ್ಲಿ 2,595, ಅರ್ಥಶಾಸ್ತ್ರದಲ್ಲಿ 1,452 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (ಶೇ 98.59), ಉಡುಪಿ (ಶೇ 98.45), ಉತ್ತರ ಕನ್ನಡ (ಶೇ 94.64) ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆ 8ನೇ ಸ್ಥಾನ (ಶೇ 91.9) ಪಡೆದಿದೆ.
536 ಖಾಸಗಿ ಮತ್ತು 71 ಸರ್ಕಾರಿ ಕಾಲೇಜುಗಳು ಶೇ 100 ಫಲಿತಾಂಶ ಪಡೆದಿವೆ. ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳು (ಶೇ 92.02) ಮುಂಚೂಣಿಯಲ್ಲಿವೆ. ಸರ್ಕಾರಿ ಕಾಲೇಜುಗಳ ಒಟ್ಟು ಫಲಿತಾಂಶ ಶೇ 74.02.
ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಭೌತವಿಜ್ಞಾನ ವಿಷಯದ ಪರೀಕ್ಷೆ ಬರೆದ 25,996 ವಿದ್ಯಾರ್ಥಿಗಳಲ್ಲಿ 14,882 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಂಡಿದ್ದಾರೆ. ರಾಸಾಯನಿಕ ವಿಜ್ಞಾನ ವಿಷಯದಲ್ಲಿ 7,700, ಗಣಿತ ವಿಜ್ಞಾನದಲ್ಲಿ 9,351, ಜೀವ ವಿಜ್ಞಾನದಲ್ಲಿ 2,159 ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸುಧಾರಿಸಿಕೊಂಡಿದ್ದಾರೆ.
ಅಂತಿಮ ಫಲಿತಾಂಶ ವೀಕ್ಷಿಸಲು https:kseab.karanataka.gov.in ವೆಬ್‌ಸೈಟ್ ಕ್ಲಿಕ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.