ADVERTISEMENT

ಬೆಳಗಾವಿ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿ ಅತೃಪ್ತ ನಾಯಕರ ಸಭೆ!

ಗಣೇಶ ಚತುರ್ಥಿ ನಂತರ, ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 11:49 IST
Last Updated 11 ಆಗಸ್ಟ್ 2024, 11:49 IST
<div class="paragraphs"><p>ಬೆಳಗಾವಿ ತಾಲ್ಲೂಕಿನ ಕಿಣಯೇ ಬಳಿಯ ರೆಸಾರ್ಟ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ, ಜಿ.ಎಂ.ಸಿದ್ಧೇಶ್ವರ, ರಮೇಶ ಜಾರಕಿಹೊಳಿ ಮತ್ತಿತರರು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ</p></div>

ಬೆಳಗಾವಿ ತಾಲ್ಲೂಕಿನ ಕಿಣಯೇ ಬಳಿಯ ರೆಸಾರ್ಟ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ, ಜಿ.ಎಂ.ಸಿದ್ಧೇಶ್ವರ, ರಮೇಶ ಜಾರಕಿಹೊಳಿ ಮತ್ತಿತರರು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ

   

ಬೆಳಗಾವಿ: ಬೆಳಗಾವಿ: ‘ಮುಡಾ’ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಪಾದಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ತಾಲ್ಲೂಕಿನ ಕಿಣಯೇ ಗ್ರಾಮದ ಬಳಿಯ ರೆಸಾರ್ಟ್‌ನಲ್ಲಿ ಬಿಜೆಪಿಯ ಹಲವು ‘ಅತೃಪ್ತ ನಾಯಕರು’ ಭಾನುವಾರ ಸಭೆ ನಡೆಸಿದರು.

ಶಾಸಕರಾದ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಪ್ರತಾಪ ಸಿಂಹ, ಜಿ.ಎಂ.ಸಿದ್ಧೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜೆಡಿಎಸ್ ಮುಖಂಡ ಎನ್‌.ಆರ್‌ ಸಂತೋಷ ಸೇರಿ ಹಲವು ಮುಖಂಡರು ಪಾಲ್ಗೊಂಡಿದ್ದರು. 

ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆಗೆ ಸಂಬಂಧಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಗಣೇಶ ಚತುರ್ಥಿ ನಂತರ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾಗಿ ಸಭೆ ಬಳಿಕ ನಾಯಕರು ಸುದ್ದಿಗಾರರಿಗೆ ತಿಳಿಸಿದರು. 

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡ ನಾಯಕರು ಈ ಸಭೆ ನಡೆಸಿದ್ದಾರೆ. ಇಬ್ಬರೂ ನಾಯಕರ ವಿರುದ್ಧ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲು ಯೋಜಿಸಿದ್ದಾರೆ’ ಎಂಬ ಮಾತು ಕೇಳಿಬಂದಿತ್ತು. ಆದರೆ, ‘ಇದು ‍ಪಕ್ಷದ ಭಿನ್ನಮತೀಯ ಚಟುವಟಿಕೆಯಲ್ಲ’ ಎಂದು ನಾಯಕರು ಸ್ಪಷ್ಟಪಡಿಸಿದರು.

‘ಪಾದಯಾತ್ರೆಗೂ ಮುನ್ನ, ಪಕ್ಷದ ಹೈಕಮಾಂಡ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಬೆಂಗಳೂರಿನಲ್ಲಿ ಇನ್ನಷ್ಟು ನಾಯಕರು ಸೇರಿಕೊಂಡು ಮತ್ತೊಂದು ಹಂತದ ಸಭೆ ಕೂಡ ಮಾಡಲಿದ್ದೇವೆ’ ಎಂದರು.

‘ಮುಡಾ’ ವಿರುದ್ಧ ನಡೆದ ಪಾದಯಾತ್ರೆ ಮೈಸೂರಿಗೆ ಮಾತ್ರ ಸೀಮಿತ. ಆದರೆ, ನಾವು ಮಾಡುತ್ತಿರುವ ಹೋರಾಟ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು. ಇದಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸಲು ಚಿಂತನೆ ನಡೆಸಿದ್ದೇವೆ’ ಎಂದು ಹೇಳಿದರು.

‘ಇದು ಯಾರೋ ಒಬ್ಬರನ್ನು ಹೀರೋ ಮಾಡಲು ಮಾಡುತ್ತಿರುವ ಹೋರಾಟವಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಅತೃಪ್ತರ ಸಭೆ ಅಲ್ಲ: ಲಿಂಬಾವಳಿ

‘ನಮ್ಮ ಸಭೆಯನ್ನು ಭಿನ್ನಮತೀಯ ಚಟುವಟಿಕೆ, ಅತೃಪ್ತರ ಸಭೆ ಎಂದು‌ ಬಿಂಬಿಸಲಾಗುತ್ತಿದೆ. ಆದರೆ, ಅತೃಪ್ತರ ಸಭೆಯಲ್ಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ‌ನಮಗೆ ಹೀನಾಯ ಸೋಲಾಯಿತು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲೂ ನಮ್ಮ‌‌ ನಿರೀಕ್ಷೆ ತಲುಪಲಾಗಲಿಲ್ಲ. ರಾಜ್ಯದಲ್ಲಿ ಮುಂಬರುವ ‌ಚುನಾವಣೆ ಗಮನದಲ್ಲಿ ಇರಿಸಿಕೊಂಡು ಈ ಸಭೆ ಮಾಡಿದ್ದೇವೆ. ನಮ್ಮಲ್ಲಿರುವ ದೋಷ ಸರಿಪಡಿಸಿಕೊಂಡು, ಪಕ್ಷ ಬಲಪಡಿಸುವ ವಿಚಾರವಾಗಿ 12 ಮಂದಿ ನಾಯಕರು ಸೇರಿಕೊಂಡು ಚರ್ಚಿಸಿದ್ದೇವೆ. ಇದು ಬಿಜೆಪಿ ಬಲವರ್ಧನೆಗಾಗಿಯೇ ಮಾಡಿದ ಸಭೆ’ ಎಂದು ಸಮರ್ಥಿಸಿಕೊಂಡರು.

‘ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಿದೆ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಇದರ ವಿರುದ್ಧ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ’ ಎಂದರು.

‘ಮೈಸೂರು ಪಾದಯಾತ್ರೆಯಲ್ಲಿ ನೀವೇಕೆ ಪಾಲ್ಗೊಳ್ಳಲಿಲ್ಲ’ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ‘ಬಳ್ಳಾರಿ ಪಾದಯಾತ್ರೆ ಮಾಡಲು ಶಕ್ತಿ ಬೇಕಲ್ಲವೆ? ಅದಕ್ಕಾಗಿ ಹೋಗಿಲ್ಲ’ ಎಂದರು. 

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಚರ್ಚೆ ಮಾಡಿಯೋ ಅಥವಾ ಮಾಡದೆಯೋ ಮೈಸೂರು ಪಾದಯಾತ್ರೆ ಘೋಷಿಸಿದ್ದರು. ಆದರೆ, ನಾವು ಸೂಕ್ತವಾಗಿ ಚರ್ಚಿಸಿ, ವ್ಯವಸ್ಥಿತವಾಗಿ ಹೋರಾಟ ಮಾಡಲು ಮುಂದಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.