ಬೆಂಗಳೂರು: ಸೆಕ್ಯುರಿಟಿ ಗಾರ್ಡ್‌ಗಳಿಬ್ಬರ ಮೇಲೆ ಸಂಸ್ಥೆ ಮಾಲೀಕ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ‘ಬೆಂಗಳೂರು ಸೆಕ್ಯೂರಿಟಿ ಪೋರ್ಸ್’ ಏಜೆನ್ಸಿ ಮಾಲೀಕ, ಎಚ್‌ಎಸ್‌ಆರ್ ಲೇಔಟ್ ನಿವಾಸಿ ಸಲೀಂ ಖಾನ್ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್‌ಗಳಾದ ಫೈಜುವುದ್ದೀನ್ ಮತ್ತು ರೈಸೆವುದ್ದೀನ್ ಹಲ್ಲೆಗೊಳಗಾದವರು. ಎಂಟು ವರ್ಷಗಳ ಹಿಂದೆ ಸಲೀಂ ಖಾನ್ ಸೆಕ್ಯುರಿಟಿ ಗಾರ್ಡ್ ಪೂರೈಸುವ ಏಜೆನ್ಸಿ ಆರಂಭಿಸಿದ್ದ. ಒಂದು ವರ್ಷದಿಂದ ಈ ಏಜೆನ್ಸಿಯಲ್ಲಿ ಅಸ್ಸಾಂನ ಫೈಜುವುದ್ದೀನ್ ಮತ್ತು ರೈಸೆವುದ್ದೀನ್ ಕೆಲಸ ಮಾಡುತ್ತಿದ್ದರು.
ಎರಡು ದಿನಗಳ ಹಿಂದೆ ರಾತ್ರಿ ಕುಡಿದ ಮತ್ತಿನಲ್ಲಿ ಫೈಜುವುದ್ದೀನ್ ಮತ್ತು ರೈಸೆವುದ್ದೀನ್, ‘ಮಾಲೀಕನ ಬಳಿ ಹಣವಿದೆ. ಆತನನ್ನು ಅಪಹರಿಸಿ ಹಣ ದೋಚೋಣ’ ಎಂದು ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ಈ ಮಾತು ಕೇಳಿಸಿಕೊಂಡಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿ, ಸಲೀಂಗೆ ಈ ವಿಷಯ ತಿಳಿಸಿದ್ದ ಎಂದೂ ಗೊತ್ತಾಗಿದೆ.
ಇದರಿಂದ ಕೋಪಗೊಂಡಿದ್ದ ಸಲೀಂ ಖಾನ್, ಆ ಇಬ್ಬರನ್ನು ಕಚೇರಿಗೆ ಸೋಮವಾರ ಕರೆಸಿಕೊಂಡಿದ್ದಾನೆ. ಬಳಿಕ ಶೂಗಾಲಿನಲ್ಲೇ ಒದ್ದು, ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಇತರೆ ಕೆಲಸಗಾರರು ಮಧ್ಯಪ್ರವೇಶಿಸಿ ಮಾಲೀಕನನ್ನು ಸಮಾಧಾನಪಡಿಸಿದ್ದಾರೆ. ಈ ದೃಶ್ಯ ವಿಡಿಯೋದಲ್ಲಿದೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ಕೃತ್ಯ ಬೆಳಕಿಗೆ ಬಂದಿದೆ. ಸೆಕ್ಯುರಿಟಿ ಗಾರ್ಡ್‌ಗಳಿಗೆ ಹಲ್ಲೆ ನಡೆಸುವ ದೃಶ್ಯವನ್ನು ಸೆಕ್ಯೂರಿಟಿ ಗಾರ್ಡ್ ಒಬ್ಬನ ಮೂಲಕ ಸಲೀಂ ಸ್ವತಃ ಚಿತ್ರೀಕರಿಸಿಕೊಂಡಿದ್ದ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.