ADVERTISEMENT

ಯುಜಿಸಿ ನಿಯಮದಂತೆ ಬಡ್ತಿಗೆ ಆಯ್ಕೆ ಸಮಿತಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 20:48 IST
Last Updated 3 ಮಾರ್ಚ್ 2021, 20:48 IST

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರಿಗೆ 2016ರ ಪರಿಷ್ಕೃತ ಯುಜಿಸಿ ವೇತನ ಶ್ರೇಣಿ ಹಾಗೂ ಯುಜಿಸಿ 2018 ರಲ್ಲಿ ಹೊರಡಿಸಿದ ನಿಯಮದಂತೆ ಬಡ್ತಿ ನೀಡಲು ರಾಜ್ಯ ಸರ್ಕಾರ ಆಯ್ಕೆ ಸಮಿತಿ ರಚಿಸಿದೆ.

ಈ ಸಮಿತಿ, ಪದೋನ್ನತಿ ನೀಡುವ ಸಂಬಂಧ ನಿಯಮಗಳಲ್ಲಿರುವ ಅಂಶಗಳ ಪ್ರಕಾರ ಸಮಗ್ರ ಮಾರ್ಗಸೂಚಿಯನ್ನು ರೂಪಿಸಿ, ಅರ್ಹರಿಗೆ ಪದೋನ್ನತಿ ನೀಡಲು ಪರಿಶೀಲಿಸುವಂತೆ ಸೂಚಿಸಲಿದೆ. ಪದೋನ್ನತಿ ನೀಡುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣದ ಆಯುಕ್ತರ ಅಧ್ಯಕ್ಷತೆಯ ಈ ಸಮಿತಿಗೆ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಸಂಚಾಲಕರಾಗಿದ್ದಾರೆ. ಉಳಿದಂತೆ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ, ಅಧ್ಯಕ್ಷರು ನಾಮನಿರ್ದೇಶನ ಮಾಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಇಬ್ಬರು ಪ್ರಾಂಶುಪಾಲರು ಮತ್ತು ಸರ್ಕಾರ ನಾಮನಿರ್ದೇಶನ ಮಾಡಲಿರುವ ವಿಶ್ವವಿದ್ಯಾಲಯ ಪ್ರೊಫೆಸರ್‌ ಶ್ರೇಣಿಯ ಇಬ್ಬರು ಪ್ರತಿನಿಧಿಗಳು, ಅಧ್ಯಕ್ಷರು ನಾಮ ನಿರ್ದೇಶನ ಮಾಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಇಬ್ಬರು ವಿಷಯ ತಜ್ಞರು, ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳಾ ಪ್ರತಿನಿಧಿಗಳು ಸದಸ್ಯರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.