ADVERTISEMENT

ತಿಂಗಳ ಒಳಗೆ ನಿಗಮ– ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 8:23 IST
Last Updated 25 ಜೂನ್ 2024, 8:23 IST
ಜಿ. ಪರಮೇಶ್ವರ
ಜಿ. ಪರಮೇಶ್ವರ   

ಬೆಂಗಳೂರು: ‘ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ನೀಡಿದ್ದು, ಒಂದು ತಿಂಗಳ ಒಳಗಾಗಿ ಆಯ್ಕೆ ಮಾಡಿ, ಪಟ್ಟಿ ನೀಡುತ್ತೇನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಎಂಟೂವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿದ ಅನುಭವವಿದೆ. ಆದ್ದರಿಂದ ಯಾವ ತೊಂದರೆಯೂ ಆಗುವುದಿಲ್ಲ’ ಎಂದರು.

‘ತುರ್ತುಪರಿಸ್ಥಿತಿಗೆ 49 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯವರು ನೀಡಿದ ಹೇಳಿಕೆಗಳ ಕುರಿತ ಪ್ರತಿಕ್ರಿಯಿಸಿದ ಅವರು, ‘ದೇಶ ಹಲವು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದನ್ನು ಬಿಟ್ಟು 49 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿರುವುದನ್ನು ಮಾತನಾಡಲು ಹೊರಟಿರುವ ಬಿಜೆಪಿಯವರಿಗೆ ದೇಶದ ಅಭಿವೃದ್ಧಿ, ಭವಿಷ್ಯ, ಜನರ ಬಗ್ಗೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ದೇಶದಲ್ಲಿ ಬಡತನ ಇನ್ನೂ ಇದೆ. ಮತ್ತಷ್ಟು ಅಭಿವೃದ್ಧಿಯಾಗಬೇಕು, ಉದ್ಯೋಗ ಸಿಗಬೇಕಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ಸಮಸ್ಯೆಯಾಗಿದೆ’ ಎಂದರು.

ಚಿತ್ರದುರ್ಗದ ರೇಣುಕಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರದ ಕುರಿತು ಮಾತನಾಡಿದ ಅವರು, ‘ಎಲ್ಲರು ಒಂದೇ ಜೈಲಿನಲ್ಲಿ ಇರುವುದು ಸೂಕ್ತವಲ್ಲ ಎಂಬ ಕಾರಣದಿಂದ ಜೈಲು ಅಧಿಕಾರಿಗಳು ಮತ್ತು ಪೊಲೀಸರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ತುಮಕೂರು ಜೈಲಿಗೆ ಸ್ಥಳಾಂತರಿಸಿದ್ದಾರೆ’ ಎಂದರು.

ಯುವತಿ ಪ್ರಬುದ್ಧ ಕೊಲೆ‌ ಪ್ರಕರಣ ಸಿಐಡಿಗೆ ವಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು,  ‘ಈವರೆಗಿನ ತನಿಖೆ ಕೊಲೆಯಾದ ಯುವತಿಯ ಪಾಲಕರಿಗೆ ಸಮಾಧಾನ ತಂದಿಲ್ಲ. ಸಿಐಡಿಗೆ ವಹಿಸುವಂತೆ ಕೋರಿ ನನಗೂ ಮನವಿ ಮಾಡಿದ್ದರು. ಮುಖ್ಯಮಂತ್ರಿ ಜೊತೆ ಚರ್ಚಿಸಿ, ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದೆ‌. ಮುಖ್ಯಮಂತ್ರಿಯವರು ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ’ ಎಂದರು.

‘ತನಿಖೆಯಲ್ಲಿ ಲೋಪ ಇರುವುದು ಗಮನಕ್ಕೆ ಬಂದಿದೆಯೇ?’ ಎಂದು ಕೇಳಿದಾಗ, ‘ಆ ರೀತಿ ಯುವತಿಯ ತಾಯಿಗೆ ಅನಿಸಿದೆ. ಮಗಳನ್ನು ಕಳೆದುಕೊಂಡಾಗ ಆ ಅಭಿಪ್ರಾಯ ಬರುವುದು ಸಹಜ. ಅಂತಹ ಅಭಿಪ್ರಾಯ ಮೂಡುವುದು ಬೇಡ ಎಂಬ ಕಾರಣದಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕುಟುಂಬಕ್ಕೆ ಬೆದರಿಕೆ ಇರುವುದನ್ನು ಸಿಐಡಿ ತನಿಖೆ ಸಂದರ್ಭದಲ್ಲಿ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೀಟ್ ಅಕ್ರಮದ ಬಗ್ಗೆ ಮೌನ ವಹಿಸಿರುವ ಕುರಿತು ಮಾತನಾಡಿದ ಪರಮೇಶ್ವರ, ‘ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ದೇಶದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬುದನ್ನು ಹೇಳಿದ್ದಾರೆ. ಆದರೆ, ಪ್ರಧಾನಿ ಮೋದಿಯವರಿಗೆ ಈ ಬಗ್ಗೆ ಏನು ಅನಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ನೀಟ್‌ ಅಕ್ರಮದ ವಿಷಯದಲ್ಲಿ ಏನಾದರೂ ಅಂತಿಮ ನಿರ್ಧಾರ ಕೈಗೊಳ್ಳಬೇಕಲ್ಲವೇ? ಮರುಪರೀಕ್ಷೆ ನಡೆಸುವುದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಲ್ಲವೇ? ಇದೆಲ್ಲವನ್ನು ಪ್ರಧಾನಿ ಮಂತ್ರಿಯವರಾಗಲಿ ಅಥವಾ ಸಂಬಂಧಪಟ್ಟ ಮಂತ್ರಿಗಳಾಗಲಿ ಜವಾಬ್ದಾರಿಯುತವಾಗಿ ತೀರ್ಮಾನ ಪ್ರಕಟಿಸಬೇಕು. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಆರಂಭವಾಗಬೇಕಿತ್ತು. ಮಕ್ಕಳು ಗೊಂದಲದಲ್ಲಿದ್ದು, ಇದರಿಂದ ಅವರ ಭವಿಷ್ಯ ಏನಾಗಬೇಕು’ ಎಂದು ಪ್ರಶ್ನಿಸಿದರು‌.

‘11 ನ್ಯಾಯಾಧೀಶರ ತೀರ್ಪು ಬದಿಗೊತ್ತಿ ನೀಟ್ ಮಾಡಿದ್ದಾರೆ‌. ಅವರು ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಮಕ್ಕಳಿಗೆ ಸರಿಯಾಗಿ, ಸುಲಭವಾಗಿ ಸೀಟು ಸಿಗುವ ರೀತಿಯಲ್ಲಿ ಮಾಡಬೇಕಲ್ಲವೇ? ರಾಜ್ಯ ಸರ್ಕಾರ ಮಾಡಿದ್ದ ಸಿಇಟಿ ಮಾದರಿಯಾಗಿತ್ತು. ರಾಜ್ಯ ಸರ್ಕಾರಗಳಿಗೆ ವಹಿಸಿದರೆ ಯಶಸ್ವಿಯಾಗಿ ನಡೆಸುತ್ತಾರೆ. ಇದನ್ನು ವ್ಯವಸ್ಥಿತವಾಗಿ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಹಿರಿಯ ಶಾಸಕರಿಗೆ ಸ್ಥಾನಕ್ಕೆ ಒತ್ತಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಸಂಪುಟ ಪುನರ್‌ರಚನೆ ಬಗ್ಗೆ ನಾನು ಏನು ಹೇಳಲು ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಎಲ್ಲವು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದರು.

ತುಮಕೂರು ಬಂದ್ ಕುರಿತು ಪ್ರತಿಕ್ರಿಯಿಸಿ, ‘ಹೇಮಾವತಿ ಕಾಲುವೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ನೀರಾವರಿ ಸಚಿವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದರು. ನೀರಾವರಿ ತಜ್ಞರೊಂದಿಗೆ ಚರ್ಚಿಸಿ ವಿಚಾರ ತಿಳಿಸಲಾಗಿತ್ತು. ನೀರಿನ ಹಂಚಿಕೆಯಲ್ಲಿ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಭೆಯಲ್ಲಿ ಅವರು ಭರವಸೆ ನೀಡಿದ್ದರು. ಆಗ ಎಲ್ಲರೂ ಒಪ್ಪಿಕೊಂಡಿದ್ದು, ತೊಂದರೆ ಆಗುವುದಿಲ್ಲವಾದರೆ ನೀರು ತೆಗೆದುಕೊಂಡು ಹೋಗುವಂತೆ ಎಲ್ಲ ಶಾಸಕರು ತಿಳಿಸಿದ್ದರು. ಈಗ ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ. ಈ ಬಗ್ಗೆ ಮುಂದೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಉಪ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.