ಬೆಂಗಳೂರು: ದೆಹಲಿಯಲ್ಲಿ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಲು, ಬುಡಕಟ್ಟು ಜನಾಂಗಕ್ಕೆ ಸೇರಿದ ರಾಜ್ಯದ ಇಬ್ಬರು ಆಯ್ಕೆಯಾಗಿದ್ದಾರೆ.
ಭಟ್ಕಳ ತಾಲ್ಲೂಕಿನ ಹಲ್ಯಾಣಿ ಗ್ರಾಮದ ಬುಡಕಟ್ಟು ಜನಾಂಗಕ್ಕೆ ಸೇರಿದ, ಟ್ಯಾಕ್ಸಿ ಚಾಲಕ ನಾಗರಾಜ ಗೊಂಡ ಹಾಗೂ ಚಾಮರಾಜನಗರ ಜಿಲ್ಲೆಯ ಸೋಲಿಗ ಮಹಿಳೆ ಮಾದಮ್ಮ ಆಯ್ಕೆಯಾದವರು.
ಹಾಡುವಳ್ಳಿ ಗ್ರಾಮ ಪಂಚಾಯಿತಿಯ ಹಲ್ಯಾಣಿ ಗ್ರಾಮದ ಹರ್ಗಿಮಕ್ಕಿಮನೆ ನಿವಾಸಿಯಾದ ನಾಗರಾಜ ಗೊಂಡ, ಕೃಷಿ ಕುಟುಂಬದಿಂದ ಬಂದವರಾಗಿ ದ್ದಾರೆ.
ಪುಣಜನೂರು ಗ್ರಾಮದ ಹೊಸಪೋಡಿನ ಮಾದಮ್ಮ (58), ಪುಣಜನೂರು ಭಾಗದಲ್ಲಿ ಸೋಲಿಗರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸಮಾರಂಭ ವೀಕ್ಷಣೆಗೆ ಆಯ್ಕೆ ಮಾಡಲು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅರ್ಜಿ ಆಹ್ವಾನಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ 32 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಲಾಟರಿ ಎತ್ತುವ ಮೂಲಕ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಈ ಇಬ್ಬರೂ ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿಸಿದ್ದಾರೆ.
ಬುಡಕಟ್ಟು ವ್ಯವಹಾರಗಳ ಇಲಾಖೆಯು ಪ್ರತಿ ವರ್ಷ ಎಲ್ಲ ರಾಜ್ಯಗಳಿಂದಲೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.