ಬೆಂಗಳೂರು: ಪಕ್ಷ ಮತ್ತು ಸರ್ಕಾರದಲ್ಲಿ ಈವರೆಗೆ ಅಧಿಕಾರ ಅನುಭವಿಸಿರುವವರು ಸಚಿವ ಸ್ಥಾನ ‘ತ್ಯಾಗ’ ಮಾಡಬೇಕು ಎಂಬ ಕೂಗು ಬಿಜೆಪಿಯಲ್ಲಿ ಪ್ರಬಲವಾಗುತ್ತಿದ್ದು, ಇದು ವರಿಷ್ಠರಿಗೆ ಹೊಸ ತಲೆನೋವು ತಂದಿದೆ.
‘ಪಕ್ಷದ ಮೂಲ ಶಾಸಕರಿಗೆ ಸಂಪುಟದಲ್ಲಿ ಹೆಚ್ಚು ಸ್ಥಾನ ಕೊಡಬೇಕು. ಮೊದಲ ಕಂತಿನಲ್ಲಿ ಹಿರಿಯರಿಗೆ ಮಣೆ ಹಾಕಲಾಗಿದ್ದು, ಹಲವು ಬಾರಿ ಶಾಸಕರಾಗಿ ಈವರೆಗೂ ಸಚಿವ ಸ್ಥಾನ ಸಿಗದವರಿಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಹೊಸಮುಖಗಳಿಗೇ ಆದ್ಯತೆ ನೀಡಬೇಕು’ ಎಂಬ ಒತ್ತಾಯ ಬಿರುಸುಪಡೆದುಕೊಂಡಿದೆ.
ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಎರಡು ದಿನಗಳ ಹಿಂದಷ್ಟೇ, ‘ಹೊಸಬರಿಗೆ ಅವಕಾಶ ನೀಡಲು ಸಂಪುಟದಲ್ಲಿರುವ ಹಿರಿಯರು ತ್ಯಾಗಕ್ಕೆ ಸಿದ್ಧರಾಗಬೇಕು’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಈ ಕೂಗು ಪಕ್ಷದಲ್ಲಿ ಪ್ರಬಲವಾಗುತ್ತಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಪಕ್ಷದಲ್ಲಿ ಈಗಾಗಲೇ ಹುದ್ದೆ, ಅಧಿಕಾರ ಅನುಭವಿಸಿರುವ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂದರೆ ಕೆಲವರು ಸಚಿವ ಸ್ಥಾನ ತ್ಯಾಗ ಮಾಡಲೇಬೇಕಾಗುತ್ತದೆ. ಈ ಹಿಂದೆ ಎಲ್ಲಾ ಸ್ಥಾನಮಾನಗಳನ್ನು ಅನುಭವಿಸಿದವರು ರಾಜೀನಾಮೆ ನೀಡಲಿ. ಹಿರಿಯ ನಾಯಕರು ಭಾಷಣ ಮಾಡುವ ಬದಲು ಹೊಸಬರಿಗೆ ದಾರಿ ಮಾಡಿಕೊಡುವುದು ಸೂಕ್ತ’ ಎಂದು ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ‘ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ. ನಾನೊಬ್ಬ ಮಂತ್ರಿಯಷ್ಟೆ. ಮುಖ್ಯಮಂತ್ರಿಯವರ ನಿರ್ಧಾರವನ್ನು ಪಾಲಿಸುವುದಷ್ಟೇ ನನ್ನ ಕೆಲಸ’ ಎಂದಿದ್ದಾರೆ.
ಪಕ್ಷದಲ್ಲಿ ಹೊಸಬರಿಗೆ ಅವಕಾಶ ನೀಡಲು ಹಿರಿಯರಿಂದ ‘ತ್ಯಾಗ’ ಬಯಸಿರುವುದೂ ವರಿಷ್ಠರ ಸೂಚನೆ ಮೇರೆಗೆ. ಆದ್ದರಿಂದಲೇ ಇಂತಹ ಹೇಳಿಕೆಗಳನ್ನು ನೀಡಿರಬಹುದು. ಸಂಪುಟದಲ್ಲಿರುವ ಕೆಲವು ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ತ್ಯಾಗದ ವಿಷಯ ಮುನ್ನೆಲೆಗೆ ಬಂದಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಯಾರನ್ನೆಲ್ಲ ಕೈಬಿಟ್ಟು ಯಾರಿಗೆಲ್ಲ ಅವಕಾಶ ನೀಡಬೇಕು ಎಂಬ ಚರ್ಚೆಯೂ ವರಿಷ್ಠರ ಮಟ್ಟದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
‘ಸೋತವರಿಗೆ ಸಚಿವ ಸ್ಥಾನ ವಿಳಂಬವಾಗಬಹುದು’
‘ಸೋತವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಮಾತು ಸರಿಯಲ್ಲ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಮುಂದೆ ಸಚಿವರನ್ನಾಗಿ ಮಾಡಬಹುದು’ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಹೇಳಿದ್ದಾರೆ.
ಸೋತವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಪಾಟೀಲ ಸಮಜಾಯಿಷಿ ನೀಡಿದ್ದಾರೆ.
‘ಇದೇ ತಿಂಗಳ 30ರಂದು ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಯಾವ ಖಾತೆ ಕೊಟ್ಟರೂ ಆಗುತ್ತದೆ. ಆದರೆ ಕೂಸು ಹುಟ್ಟುವುದಕ್ಕಿಂತ ಮುಂಚೆಯೇ ಕುಲಾವಿ ಹೊಲಿಸುವುದು ಹೇಗೆ’ ಎಂದು ಪ್ರಶ್ನಿಸಿದರು.
‘17 ಜನರಲ್ಲಿ ಕೆಲವರಿಗಷ್ಟೇ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಯಾಲೀ, ಬಿಜೆಪಿ ವರಿಷ್ಠರಾಗಲಿ ಎಲ್ಲೂ ಹೇಳಿಲ್ಲ. ಇವೆಲ್ಲಾ ಊಹಾಪೋಹ. ಏನು ಆಗಬೇಕು, ಎಲ್ಲವೂ ಮಂತ್ರಿಮಂಡಲ ವಿಸ್ತರಣೆ ದಿವಸ ಗೊತ್ತಾಗುತ್ತದೆ’ ಎಂದರು.
17 ಜನ ಒಟ್ಟಾಗಿದ್ದೇವೆ ಎಂದು ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈಗ ಸದ್ಯಕ್ಕೆ ಇಲ್ಲಿ ನಾನೊಬ್ಬನೇ ಇದ್ದೇನೆ. ಎಲ್ಲರದ್ದೂ ಒಂದೇ ಭಾವನೆ ಇರಲ್ಲ. ವ್ಯತಿರಿಕ್ತವಾದ ಅಭಿಪ್ರಾಯಗಳಿರುತ್ತೆ. ಅವರವರ ಮನಸ್ಥಿತಿಗೆ ತಕ್ಕಂತೆ ಹೇಳುತ್ತಾರೆ’ ಎಂದರು.
***
ಹಿರಿಯರು ಸ್ಥಾನ ತ್ಯಾಗ ಮಾಡಬೇಕು ಎಂಬ ವಿಚಾರದ ಕುರಿತು ಏನೂ ಹೇಳುವುದಿಲ್ಲ. ನಾನು ಮಾಜಿ ಮುಖ್ಯಮಂತ್ರಿ. ಈಗ ಕೇವಲ ಮಂತ್ರಿ, ಮುಖ್ಯಮಂತ್ರಿ ಉತ್ತರ ಕೊಡಬಹುದು
ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ
***
ಸರ್ಕಾರದ ಹಿತಕ್ಕಾಗಿ ಪಕ್ಷ ಬಯಸಿದರೆ ಸಚಿವ ಸ್ಥಾನ ಮಾತ್ರವಲ್ಲ ಶಾಸಕ ಸ್ಥಾನ ತ್ಯಾಗ ಮಾಡಲೂ ಸಿದ್ಧನಿದ್ದೇನೆ. ಇದನ್ನು ಸಂತೋಷದಿಂದ ಮಾಡಲು ಸಿದ್ಧನಿದ್ದೇನೆ
– ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.