ವಿಜಯಪುರ: ‘ಸಚಿವ ಸಿ.ಸಿ.ಪಾಟೀಲರ ಬಲಿಕೊಟ್ಟು, ನಾನು ಸಚಿವನಾಗಲು ಬಯಸುವುದಿಲ್ಲ. ಸಚಿವ ಸ್ಥಾನ ನೀಡಿದರೆ ಕ್ಯಾಬಿನೆಟ್ ಸ್ಥಾನವನ್ನೇ ನೀಡಬೇಕು. ಸಣ್ಣಪುಟ್ಟ ಸ್ಥಾನಮಾನ ಒಪ್ಪಲ್ಲ. ನೀಡದಿದ್ದರೆ ಶಾಸಕನಾಗಿ ಮುಂದುವರೆಯುತ್ತೇನೆ’ ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.
‘ರಾಜ್ಯದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದವರು ತಮ್ಮ ಸಚಿವ ಸ್ಥಾನ ತ್ಯಾಗ ಮಾಡಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.
‘ಕೇಂದ್ರದಲ್ಲಿ ಮಂತ್ರಿಯಾದವನು ನಾನು. ಆದರೂ ಮಂತ್ರಿ ಸ್ಥಾನವನ್ನುತ್ಯಾಗ ಮಾಡಿದ್ದೇನೆ. ನಾನು ಯಾವುದೇ ಸ್ಥಾನಮಾನ ನೀಡಲು ಒತ್ತಡ ಹಾಕಿಲ್ಲ’ ಎಂದೂ ಹೇಳಿದರು.
‘ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕು ಎಂಬುದು ಸಹಜ ಬೇಡಿಕೆ. ಡಿಸಿಎಂ ಸ್ಥಾನಗಳ ಹೆಚ್ಚಳದಿಂದ, ಆ ಹುದ್ದೆಯ ಗೌರವ ಕಡಿಮೆ ಆಗಲಿದೆ. ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡುವ ವ್ಯವಸ್ಥೆಯಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕೆಲ ಸಚಿವರು ವಿಧಾನಸೌಧಕ್ಕೆ ಸೀಮಿತರಾಗಿದ್ದಾರೆ. ಹೈಕಮಾಂಡ್ ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ಮಾಡಬೇಕು. ಇಲ್ಲದಿದ್ದರೆ ಕೇವಲ ಗೂಟದ ಕಾರು, ಗನ್‌ಮ್ಯಾನ್ ಇಟ್ಟುಕೊಂಡಂತಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.