ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣಕ್ಕಾಗಿ ಇಳಿಜಾರನ್ನು ಅತಿಯಾಗಿ ಕತ್ತರಿಸುವುದೂ, ಗಣಿಗಾರಿಕೆ ನಡೆಸುವುದೂ ಭೂಕುಸಿತಕ್ಕೆ ಕಾರಣ ಎಂದು ಇಸ್ರೊ ಅಂಗ ಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ಭಾರತೀಯ ಭೂಗರ್ಭ ಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ ನಡೆಸಿರುವ ಜಂಟಿ ಅಧ್ಯಯನದ ವರದಿ ತಿಳಿಸಿದೆ.
ಪಶ್ಚಿಮ ಘಟ್ಟವು ಮೂಲತಃ ಭೂಕುಸಿತದ ಸಾಧ್ಯತೆ ಇರುವ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿನ ಕಲ್ಲು ಮಿಶ್ರಿತ ಸಡಿಲವಾದ ಮಣ್ಣಿನ ರಚನೆ, ಕಡಿದಾದ ಗುಡ್ಡಗಳು, ತೆಳುವಾದ ಮೇಲ್ಮಣ್ಣಿನ ಹೊದಿಕೆ– ಇವೆಲ್ಲ ಭೂಕುಸಿತಕ್ಕೆ ಪೂರಕವಾಗಬಲ್ಲ ಸನ್ನಿವೇಶ ಸೃಷ್ಟಿಸಬಲ್ಲವು ಎಂದು ಹೇಳಿದೆ.
ಕಲ್ಲು ಬಂಡೆಗಳ ಅದಿರಿನ ಸ್ವರೂಪ ಮತ್ತು ರಚನೆ, ಮೇಲ್ಮಣ್ಣು ಹಾಗೂ ಕೆಳಸ್ತರದ ಭೂರಚನೆ, ಮೇಲ್ಪದರ ಹಸಿರು ಮರಗಿಡಗಳ ಹೊದಿಕೆ ಅಥವಾ ಕಾಡಿನ ನಾಶ, ಇಳಿಜಾರಿನ ಪ್ರದೇಶದ ಭೂಸ್ವರೂಪ ಬದಲಾವಣೆ, ನೀರಿನ ಹರಿವಿನ ನೈಸರ್ಗಿಕ ಬಸಿಗಾಲುವೆಗಳ ನಾಶ ಆಥವಾ ಹೂಳು ತುಂಬಿರುವುದು ಅಥವಾ ಅವುಗಳನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಮತ್ತೊಂದು
ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಣ್ಣು ಸಡಿಲವಾದ ಪ್ರದೇಶದಲ್ಲಿಯೇ ಮಳೆಯ ನೀರು ಹರಿಯುವುದು ಮತ್ತು ಇಂಗುವುದು, ಇಳಿಜಾರು ಪ್ರದೇಶದ ಕ್ವಾರಿಗಳು, ಕಡಿದಾದ ಇಳಿಜಾರಿನಲ್ಲಿ ಕಾಮಗಾರಿಗಳು, ಗುಡ್ಡಗಳ ಬುಡದಲ್ಲಿ ಮಣ್ಣು ಸವೆತ, ತೊರೆ–ಹೊಳೆಯಂಚುಗಳಲ್ಲಿ ಮಣ್ಣು ಸವೆತ ಕೂಡ ಭೂಕುಸಿತಕ್ಕೆ ಕಾರಣವಾಗಿದೆ.
ಇವೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಭೂಕುಸಿತಕ್ಕೆ ಪೂರಕ ಪರಿಸ್ಥಿತಿ ನಿರ್ಮಿಸುತ್ತಿವೆ. ಒಟ್ಟಾರೆಯಾಗಿ, ಇದರಿಂದಾಗುವ ಈ ಬಗೆಯ ಭೂ ಕುಸಿತಗಳು ‘ತೇವಾಂಶ ಭರಿತ ಮಣ್ಣು ಹಾಗೂ ಕಲ್ಲು ಬಂಡೆಗಳ ಜಾರುವಿಕೆ’ ಎಂದು ತಜ್ಞರು ಗುರುತಿಸುತ್ತಾರೆ.
ಭೂಕುಸಿತಕ್ಕೆ ಎರಡು ಬಗೆಯ ಕಾರಣ: ವರದಿ
lಒಮ್ಮೆಲೆ ಅತಿಯಾಗಿ ಸುರಿಯುವ ಭಾರಿ ಮಳೆ (ಕರ್ನಾಟಕದಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ ಸರಾಸರಿ ಒಂದೇ ರೀತಿ ಇದ್ದರೂ, ಕೆಲವೇ ಗಂಟೆಗಳಲ್ಲಿ ಒಮ್ಮೆಲೇ ಅತಿಯಾಗಿ ಮಳೆ ಸುರಿಯುವ ಸಂದರ್ಭಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವುದನ್ನು ಹವಾಮಾನ ತಜ್ಞರು ದಾಖಲಿಸಿದ್ದಾರೆ. ಸ್ಥಳೀಯ ಹಾಗೂ ಜಾಗತಿಕ ಪರಿಸರದ ಗುಣಮಟ್ಟದಲ್ಲಿನ ಭಾರಿ ಏರು ಪೇರಿನಿಂದಾಗುತ್ತಿರುವ ಒಟ್ಟಾರೆ ಫಲಶೃತಿಯಾದ ಹವಾಮಾನ ಬದಲಾವಣೆಯ ಪರಿಣಾಮ).
lಸಡಿಲವಾದ ಮೇಲ್ಮಣ್ಣಿನ ಹಸಿರು ಹೊದಿಕೆಯನ್ನು ನಾಶ ಮಾಡುವ ಹಾಗೂ ಭಾರಿ ಪ್ರಮಾಣದ ಮಳೆ ನೀರನ್ನು ಒಮ್ಮೆಲೆ ಮಣ್ಣಿನೊಳಕ್ಕೆ ಬಿಟ್ಟುಕೊಡುವ ರೀತಿಯ ಭೂಸ್ವರೂಪ ಪರಿವರ್ತನೆ. ಒಂದು ಪ್ರದೇಶದಲ್ಲಿ ಏಕ ಕಾಲಕ್ಕೆ ಇವೆರಡೂ ಪ್ರಚೋದನೆಗಳು ಜೊತೆಯಾದರೆ ಅಲ್ಲಿ ಭೂಕುಸಿತವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.