ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಭಾಗವಾಗಿದ್ದ ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಲು ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳಿಗೆ ಸೂಚನೆ ನೀಡಿರುವ ಉನ್ನತ ಶಿಕ್ಷಣ ಇಲಾಖೆ, ಗೊಂದಲಕ್ಕೆ ತೆರೆ ಎಳೆದಿದೆ.
ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಇಪಿ ಜಾರಿಗೊಳಿಸಿದ ನಂತರ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಈಗ 6ನೇ ಸೆಮಿಸ್ಟರ್‌ನಲ್ಲಿ ಇದ್ದಾರೆ. ವಿಶ್ವವಿದ್ಯಾಲಯಗಳ ಕುಲಪತಿಗಳು, ಪದವಿ ಕಾಲೇಜುಗಳ ಪ್ರಾಂಶುಪಾಲರು ಸರ್ಕಾರಕ್ಕೆ ಪತ್ರ ಬರೆದು, ನಾಲ್ಕು ವರ್ಷಗಳ ಪದವಿಗೆ ಅವರನ್ನು ಮುಂದುವರಿಸುವ ಕುರಿತು ಸ್ಪಷ್ಟನೆ ಕೇಳಿದ್ದರು. ಈ ಕುರಿತು ಈಚೆಗೆ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸದಸ್ಯರು, ನಾಲ್ಕು ವರ್ಷಗಳ ಆನರ್ಸ್ ಪದವಿ ರದ್ದು ಮಾಡಲು ನಿರ್ಧರಿಸಿದ್ದರು.
‘ನಾಲ್ಕು ವರ್ಷಗಳ ಪದವಿಗೆ ಪ್ರವೇಶ ನೀಡಬಾರದು. ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರದ ನಿರ್ಧಾರ ಮನವರಿಕೆ ಮಾಡಿಕೊಡಬೇಕು. ಈ ಕುರಿತು ಸೂಕ್ತ ಮಾಹಿತಿ ನೀಡಬೇಕು’ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದು, ಮೇ 8ರಂದು ಅಧಿಕೃತ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆ ನಾಲ್ಕು ವರ್ಷಗಳ ಪದವಿ ಕೈಬಿಡುವ ನಿರ್ಧಾರ ತೆಗೆದುಕೊಂಡಿದೆ. ಆಯೋಗ ಇದೇ ಆಗಸ್ಟ್‌ನಲ್ಲಿ ಅಂತಿಮ ವರದಿ ಸಲ್ಲಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.