ಬೆಂಗಳೂರು: ಜೀತ ಪದ್ಧತಿ ನಿಷೇಧಿಸಿ 48 ವರ್ಷಗಳು ಕಳೆದರೂ ಬೆಂಗಳೂರು ಮತ್ತು ರಾಜ್ಯದ ಇತರ 10 ಜಿಲ್ಲೆಗಳಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದೆ.
ಜೀತ ಕಾರ್ಮಿಕ ಪದ್ಧತಿಯನ್ನು ಪತ್ತೆ ಮಾಡಿ ಅದನ್ನು ಕೊನೆಗಾಣಿಸಲೆಂದು ರಾಜ್ಯ ಸರ್ಕಾರ ಹೊಸದಾಗಿ 52 ಅಧಿಕಾರಿಗಳನ್ನು ನೇಮಿಸಿದ್ದು, ‘ಜೀತ ನಿಗ್ರಹ ಅಧಿಕಾರಿಗಳು’ ಎಂದು ಅವರನ್ನು ಕರೆಯಲಾಗಿದೆ.
ಎಲ್ಲೆಲ್ಲಿ ಜೀತ ಕಾರ್ಮಿಕ ಪದ್ಧತಿ ಇದೆ ಎಂಬುದನ್ನು ಪತ್ತೆ ಮಾಡಿ, ಅದಕ್ಕೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಆಪಾದಿತರನ್ನು ಶಿಕ್ಷೆಗೆ ಗುರಿಪಡಿಸುವುದು ಮತ್ತು ಸಾರ್ವಜನಿಕರು ಹಾಗೂ ವಾಣಿಜ್ಯೋದ್ಯಮ ವಲಯದಲ್ಲಿ ಅರಿವು ಮೂಡಿಸುವುದು ಈ ಅಧಿಕಾರಿಗಳ ಕೆಲಸವಾಗಿದೆ.
ರಾಜ್ಯದಲ್ಲಿ 2016 ರಿಂದ 2024ರ ಅವಧಿಯಲ್ಲಿ 2,631 ಜೀತ ಕಾರ್ಮಿಕ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಜೀತ ಮುಕ್ತರಾದ 4,397 ಕಾರ್ಮಿಕರಿಗೆ ಸರ್ಕಾರ ಪಿಂಚಣಿಯನ್ನು ನೀಡಿದೆ. ಜೀತ ಮುಕ್ತರಿಗೆ ಪಿಂಚಣಿ ಮೊತ್ತವನ್ನು ₹1,000 ರಿಂದ ₹2,000ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರ ಜೀತ ಮುಕ್ತರ ಪುನರ್ವಸತಿಗಾಗಿ ಪುರುಷರಿಗೆ ತಲಾ ₹1 ಲಕ್ಷ, ಮಹಿಳೆಯರು ಮತ್ತು ಮಕ್ಕಳಿಗೆ ₹2 ಲಕ್ಷ, ತೀವ್ರ ಶೋಷಣೆಗೊಳ ಗಾದವರಿಗೆ ₹3 ಲಕ್ಷ ನೀಡುತ್ತದೆ. ಆದರೆ, ಸಕ್ಷಮ ನ್ಯಾಯಾಲಯದಿಂದ ಅಂತಿಮ ತೀರ್ಪು ಹೊರಬಿದ್ದ ಬಳಿಕವೇ ಈ ಮೊತ್ತ ಸಂದಾಯವಾಗುತ್ತದೆ.
ರಾಜ್ಯದಲ್ಲಿ ಜೀತ ಪದ್ಧತಿಯನ್ನು ಸಂಪೂರ್ಣ ತೊಡೆದು ಹಾಕುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2024–25ರ ಬಜೆಟ್ ಭಾಷಣದಲ್ಲಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 52 ಜೀತ ನಿರ್ಬಂಧ ಅಧಿಕಾರಿ ಗಳನ್ನು ನೇಮಿಸಲಾಗಿದೆ. ಈ ತಂಡದಲ್ಲಿ ಪೊಲೀಸ್, ಶಿಕ್ಷಣ, ಕಾರ್ಮಿಕ, ಸಮಾಜ ಕಲ್ಯಾಣ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮುಂತಾದ ಇಲಾಖೆ ಅಧಿಕಾರಿಗಳು ಇದ್ದಾರೆ.
‘ಜೀತ ಪದ್ಧತಿ ನಿರ್ಮೂಲನೆಗೆ ಈಗಾಗಲೇ ಅಧಿಕಾರಿಗಳಿಗೆ ಸಾಕಷ್ಟು ಅಧಿಕಾರವನ್ನು ನೀಡಲಾಗಿದೆ. ಹೊಸದಾಗಿ ಜೀತ ನಿಗ್ರಹ ಅಧಿಕಾರಿಗಳ ನೇಮಿಸುವ ಅಗತ್ಯ ಏನಿತ್ತು? ಇರುವ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಿ ಈ ಪಿಡುಗನ್ನು ನಿಗ್ರಹಿಸಬಹುದಾಗಿದೆ. ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ 1976 ಅತ್ಯಂತ ಪರಿಣಾಮಕಾರಿ ಕಾಯ್ದೆ. ಅದನ್ನು ಸರಿಯಾಗಿ ಜಾರಿ ಮಾಡಿದರೂ ಸಾಕು’ ಎಂದು ಜೀತ ಕಾರ್ಮಿಕರ ವಿಮುಕ್ತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ‘ಜೀವಿಕ’ ಸಂಘಟನೆಯ ಕಿರಣ್ ಕಮಲ್ ಪ್ರಸಾದ್ ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.