ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರು ಭಾಗವಹಿಸಿದರು.
ಭಾನುವಾರ ರಾತ್ರಿ ವೇಳೆಗೆ ಹೈಕಮಾಂಡ್ನಿಂದ ವಿರೋಧ ಪಕ್ಷದ ನಾಯಕರ ಹೆಸರು ಪ್ರಕಟ ಆಗಬಹುದೆಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿ ಇತ್ತು. ಆದರೆ, ಬೆಳಿಗ್ಗೆ ಕಲಾಪ ಆರಂಭವಾದರೂ ಯಾವುದೇ ಸಂದೇಶ ಬರಲಿಲ್ಲ. ಹೀಗಾಗಿ, ಯಾರ ನಾಯಕತ್ವದಲ್ಲಿ ಸದನದಲ್ಲಿ ಮುನ್ನಡೆಯಬೇಕು ಎಂಬ ಗೊಂದಲದಲ್ಲೇ ಸದಸ್ಯರು ಕಲಾಪದಲ್ಲಿ ಭಾಗವಹಿಸಿದರು.
ವಿರೋಧ ಪಕ್ಷದ ಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ತೆರವಾಗಿದೆ.
ಸೋಮವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಅಕ್ರಮ ವರ್ಗಾವಣೆ ಕುರಿತು ಚರ್ಚೆಗೆ ನಿಲುವಳಿ ಸೂಚನೆ ಮಂಡನೆ ವಿಚಾರವನ್ನು ಸಿ.ಟಿ. ರವಿ ಪ್ರಸ್ತಾಪಿಸಿದರು. ಅದೇ ವೇಳೆ ಸಿ.ಟಿ. ರವಿ ಅವರ ಹಿಂಭಾಗದ ಆಸನದಲ್ಲಿದ್ದ ಎನ್. ರವಿಕುಮಾರ್ ಕೂಡಾ ಅದಕ್ಕೆ ದನಿಗೂಡಿಸಿದರು. ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಕಲಾಪದ ನಂತರವೇ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡುವುದಾಗಿ ತಿಳಿಸಿ ಸಭಾಪತಿ ಬಸವರಾಜ ಹೊರಟ್ಟಿ ಇಬ್ಬರನ್ನೂ ಕುಳ್ಳಿರಿಸಿದರು.
ಕಲಾಪದ ಮಧ್ಯೆ ವಿರೋಧ ಪಕ್ಷದ ನಾಯಕರು ಯಾವಾಗ ಎದ್ದು ನಿಂತರೂ, ಅವರಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಆದರೆ, ಆ ಸ್ಥಾನ ಖಾಲಿ ಇರುವ ಕಾರಣ ಬಿಜೆಪಿ ಈ ಅವಕಾಶವನ್ನು ತಪ್ಪಿಸಿಕೊಂಡಿದೆ. ವರ್ಷದ ಹಿಂದೆಯೂ ಎರಡು ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಬಿಜೆಪಿ ಸದಸ್ಯರು ಪರಿಷತ್ ಕಲಾಪದಲ್ಲಿ ಭಾಗವಹಿಸಿದ್ದರು.
ಇಬ್ಬರ ಮಧ್ಯೆ ಪೈಪೋಟಿ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎನ್. ರವಿಕುಮಾರ್ ಮತ್ತು ಸಿ.ಟಿ. ರವಿ ಹೆಸರು ಮುಂಚೂಣಿಯಲ್ಲಿದೆ. ಹೈಕಮಾಂಡ್ ನಾಯಕರ ಒಲವು ಯಾರ ಕಡೆ ಇದೆ ಎಂಬ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.