ADVERTISEMENT

ಕೋವಿಡ್‌ ಸೋಂಕು ದೃಢಪಟ್ಟವರಿಗೆ 7 ದಿನ ಪ್ರತ್ಯೇಕವಾಸ ಕಡ್ಡಾಯ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 15:54 IST
Last Updated 26 ಡಿಸೆಂಬರ್ 2023, 15:54 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ಕೋವಿಡ್‌ ಸೋಂಕು ದೃಢಪಟ್ಟವರಿಗೆ ಏಳು ದಿನಗಳ ಪ್ರತ್ಯೇಕವಾಸವನ್ನು ಕಡ್ಡಾಯಗೊಳಿಸಲು ಮಂಗಳವಾರ ನಡೆದ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂ‍ಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಜೆಎನ್‌.1 ಉಪ ತಳಿಯ ಕೋವಿಡ್‌ ವೈರಾಣು ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದರಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲು ಸಂಪುಟ ಉಪ ಸಮಿತಿ ಸಭೆ ನಡೆಸಿದ್ದು, ಕಡ್ಡಾಯ ಪ್ರತ್ಯೇಕವಾಸ ಸೇರಿದಂತೆ ಹಲವು ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸುದ್ದಿಗಾರರಿಗೆ ತಿಳಿಸಿದರು.

ಕಡ್ಡಾಯ ಪ್ರತ್ಯೇಕವಾಸದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ನೌಕರರಿಗೆ ಏಳು ದಿನಗಳ ರಜೆ ನೀಡಬೇಕು. ತೀವ್ರ ನಿಗಾ ಘಟಕ (ಐಸಿಯು) ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್‌ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವವರೆಗೂ ರಜೆ ನೀಡಬೇಕು. ಈ ಸಂಬಂಧ ಶೀಘ್ರದಲ್ಲಿ ಮಾರ್ಗಸೂಚಿ ಹೊರಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಈ ಕಾರಣದಿಂದ ಜ್ವರ, ನೆಗಡಿ ಸೇರಿದಂತೆ ಆರೋಗ್ಯದ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚನೆ ನೀಡಲಾಗುವುದು. ಮಕ್ಕಳಿಗೆ ಮನೆಯಲ್ಲೇ ಆರೈಕೆ ನೀಡುವ ಕುರಿತೂ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ತಿಳಿಸಿದರು.

ಕೋವಿಡ್‌ ವಾರ್ಡ್‌: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಲಾಗುವುದು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ರಾಜೀವ್‌ ಗಾಂಧಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ಗಳೊಂದಿಗೆ ಐಸಿಯು ಹಾಸಿಗೆ ಹಾಗೂ ಪ್ರತ್ಯೇಕವಾಸದ ಹಾಸಿಗೆಗಳನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.

ಕೋವಿಡ್‌ ಶಂಕೆಯ ಮೇಲೆ ಆಸ್ಪತ್ರೆಗೆ ಬರುವ ಎಲ್ಲರನ್ನೂ ಸಿ.ಟಿ ಸ್ಕ್ಯಾನಿಂಗ್‌ಗೆ ಒಳಪಡಿಸುವಂತಿಲ್ಲ. ಕೋವಿಡ್‌ ದೃಢಪಟ್ಟವರಿಗೆ ಮಾತ್ರ ಈ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಕೋವಿಡ್‌ ದೃಢಪಟ್ಟವರ ಸಂಪರ್ಕದಲ್ಲಿದ್ದವರು, ಪ್ರತ್ಯೇಕ ವಾಸದಲ್ಲಿರುವವರ ಮೇಲೂ ನಿಗಾ ಇರಿಸಲಾಗುವುದು ಎಂದು ಹೇಳಿದರು.

ಸಂಪುಟ ಉಪ ಸಮಿತಿ ಸದಸ್ಯರಾದ ಡಾ.ಎಚ್‌.ಸಿ. ಮಹದೇವಪ್ಪ, ಡಾ.ಶರಣ ಪ್ರಕಾಶ ಪಾಟೀಲ, ಡಾ.ಎಂ.ಸಿ. ಸುಧಾಕರ್‌, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸಭೆಯಲ್ಲಿದ್ದರು.

ಕೋವಿಡ್‌ನಿಂದ ಏಳು ಸಾವು

‘ರಾಜ್ಯದಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಕೋವಿಡ್‌ನಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ನಾಲ್ವರು ಕೋವಿಡ್‌ ಲಸಿಕೆ ಪಡೆದಿರಲಿಲ್ಲ. ಮೃತಪಟ್ಟ ಮೂವರಲ್ಲಿ ಜೆಎನ್‌.1 ಉಪ ತಳಿಯ ವೈರಾಣು ಪತ್ತೆಯಾಗಿದೆ’ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಜೆಎನ್‌.1 ಉಪ ತಳಿಯ ವೈರಾಣುವಿನ ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೊಸ ವರ್ಷಾಚರಣೆ ಸೇರಿದಂತೆ ಯಾವುದೇ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರುವುದಿಲ್ಲ ಎಂದರು.

30 ಸಾವಿರ ಡೋಸ್‌ ಲಸಿಕೆಗೆ ಕೋರಿಕೆ

ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಫ್ಲೂ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಪುಟ ಉಪ ಸಮಿತಿಯು ಈ ತೀರ್ಮಾನ ಕೈಗೊಂಡಿದೆ ಎಂದು ಸಚಿವ ದಿನೇಶ್‌ ಹೇಳಿದರು. ಗಂಭೀರ ಸ್ವರೂಪದ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಇನ್ನೊಂದು ಡೋಸ್‌ ಕೋವಿಡ್‌ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ 30000 ಡೋಸ್‌ ಕೋವಿಡ್‌ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದರು.

ಕೋವಿಡ್: 6 ಸಾವಿರ ದಾಟಿದ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6,403 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಹೊಸದಾಗಿ 74 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. 

ಸೋಂಕು ದೃಢ ಪ್ರಮಾಣ ಶೇ 1.15ರಷ್ಟು ವರದಿಯಾಗಿದೆ. ಸಕ್ರಿಯ ಪ‍್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗದೆ. ಸೋಂಕಿತರಲ್ಲಿ 423 ಮಂದಿ ಮನೆ ಆರೈಕೆಗೆ ಒಳಗಾದರೆ, 41 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ಮಂದಿಗೆ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲಿ 44 ಮಂದಿ ಚೇತರಿಸಿಕೊಂಡಿದ್ದಾರೆ. 

ಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆ 2 ಸಾವಿರದ ಗಡಿ (2,104) ದಾಟಿದೆ. ಹೊಸದಾಗಿ 57 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 376ಕ್ಕೆ ಏರಿಕೆಯಾಗಿದೆ. ಮೈಸೂರು (32) ಹೊರತುಪಡಿಸಿ ಉಳಿದೆಡೆ ಸಕ್ರಿಯ ಪ್ರಕರಣಗಳು ಒಂದಂಕಿಯಲ್ಲಿವೆ. 

ಮರಣ ಪ್ರಕರಣಗಳಲ್ಲಿ ಇಬ್ಬರೂ 51 ವರ್ಷದವರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ದೃಢಪಟ್ಟ ಮರಣ ಪ್ರಕರಣದಲ್ಲಿ ತೀವ್ರ ಉಸಿರಾಟದ ಸಮಸ್ಯೆ ಕಾರಣ ವ್ಯಕ್ತಿ ಡಿ.22ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಡಿ.23ರಂದು ಮೃತಪಟ್ಟಿದ್ದಾರೆ. ಅವರು ಹೃದಯ, ಶ್ವಾಸಕೋಶ ಸಂಬಂಧಿ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಮೈಸೂರಿನಲ್ಲಿ ದೃಢಪಟ್ಟ ಮರಣ ಪ್ರಕರಣದಲ್ಲಿ ವ್ಯಕ್ತಿ ಡಿ.20ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಡಿ.25ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಜತೆಗೆ ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಹೊಂದಿದ್ದರು. 

ದೇಶದಲ್ಲಿ ಹೊಸದಾಗಿ 412 ಕೊರೊನಾ ಪ್ರಕರಣ ಪತ್ತೆ

ನವದೆಹಲಿ (ಪಿಟಿಐ): ದೇಶದಲ್ಲಿ ಮಂಗಳವಾರ 412 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ  4,170ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 4.50 ಕೋಟಿಯಾಗಿದ್ದು, 4.44 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಶೇ 98.81ರಷ್ಟಿದೆ. ಒಟ್ಟು 5,33,337 ಮಂದಿ ಸಾಂಕ್ರಾಮಿಕದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಈವರೆಗೆ ದೇಶದಾದ್ಯಂತ 220.76 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ.

ಜೆಎನ್‌.1 ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ:

ಮತ್ತೆ ಆರು ಜನರಲ್ಲಿ ಕೊರೊನಾ ವೈರಾಣುವಿನ ಹೊಸ ಉಪ ತಳಿ ಜೆಎನ್‌.1 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ  ಜೆಎನ್‌.1 ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರ ಪೈಕಿ ಬಹುತೇಕರು ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಏರಿಕೆಯಾಗಿಲ್ಲ ಎಂದಿದ್ದಾರೆ.

‘ಸೋಂಕು ಅಪಾಯಕಾರಿಯಾಗಿ ಉಲ್ಬಣಗೊಳ್ಳದಿದ್ದರೂ ರಾಜ್ಯಗಳು ಪರೀಕ್ಷೆ ಹೆಚ್ಚಿಸಿ ಕಣ್ಗಾವಲು ವ್ಯವಸ್ಥೆಯನ್ನು ಚುರುಕುಗೊಳಿಸಬೇಕಾದ ಅಗತ್ಯವಿದೆ’ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.