ADVERTISEMENT

7ನೇ ವೇತನ ಆಯೋಗದ ಶಿಫಾರಸು ಜಾರಿ: ಆ. 1ಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ

ಶೇ 27.50ರಷ್ಟು ಫಿಟ್‌ಮೆಂಟ್, ಶೇ 31ರಷ್ಟು ತುಟ್ಟಿಭತ್ಯೆ ಮೂಲವೇತನಕ್ಕೆ ವಿಲೀನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 20:47 IST
Last Updated 15 ಜುಲೈ 2024, 20:47 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಪರಿಷ್ಕೃತ ವೇತನ ಶ್ರೇಣಿ ಆಗಸ್ಟ್ 1ರಿಂದ ನೌಕರರಿಗೆ ಸಿಗಲಿದೆ.

ಪರಿಷ್ಕೃತ ವೇತನ ಶ್ರೇಣಿ ಜಾರಿ ಮಾಡದೇ ಇದ್ದರೆ ಇದೇ ತಿಂಗಳ 29ರ ಬಳಿಕ ಕೆಲಸ ಸ್ಥಗಿತದ ಮುಷ್ಕರ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಸಿತ್ತು. ಅಲ್ಲದೇ, ಎರಡು ಹಂತಗಳಲ್ಲಿ ಪ್ರತಿಭಟನೆಯನ್ನೂ ನಡೆಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ಸೋಮವಾರ ನಡೆದ ಸಚಿವ ಸಂಪುಟ ಸಭೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿದೆ. 

ADVERTISEMENT

ವೇತನ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ ರಾವ್ ನೇತೃತ್ವದ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿತ್ತು. ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು. 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ  ಶೇ 17ರಷ್ಟು ಮಧ್ಯಂತರ ಪರಿಹಾರ ನೀಡುವ ನಿರ್ಧಾರವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿತ್ತು. ಬಾಕಿ ಉಳಿದಿರುವ ಶೇ 10.50ರಷ್ಟು ನೀಡಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2022ರ ಜುಲೈನಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆಯನ್ನು ಜಾರಿ ಮಾಡುವಂತೆ ಆಯೋಗ ಶಿಫಾರಸು ಮಾಡಿತ್ತು. ಆಯೋಗದ ಬಹುತೇಕ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದೂ ಮೂಲಗಳು ಹೇಳಿವೆ. 

ಈಗಾಗಲೇ ಶೇ 17ರಷ್ಟು ವೇತನ ಕೊಡಲಾಗುತ್ತಿದೆ. ಅದಕ್ಕಾಗಿ, ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಆಯೋಗದ ಶಿಫಾರಸಿನಂತೆ ಶೇ 27.50ಕ್ಕೆ ಹೆಚ್ಚಿಸಿದರೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ ಎನ್ನಲಾಗಿದೆ.

ಆಯೋಗದ ಶಿಫಾರಸು ಏನು?

ಸುಧಾಕರ್‌ ರಾವ್ ನೇತೃತ್ವದ ಏಳನೇ ವೇತನ ಆಯೋಗವು ಇದೇ ಮಾರ್ಚ್‌ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 244 ಪುಟಗಳ ವರದಿಯನ್ನು ಸಲ್ಲಿಸಿತ್ತು. ಅಷ್ಟರಲ್ಲೇ ಲೋಕಸಭೆ ಚುನಾವಣೆ ಬಂದಿದ್ದರಿಂದಾಗಿ, ಈ ಕುರಿತು ನಿರ್ಣಯ ಕೈಗೊಂಡಿರಲಿಲ್ಲ.

ಆರಂಭಿಕ ವೃಂದದ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ₹17 ಸಾವಿರ ಇದ್ದು, ಅದನ್ನು ಗರಿಷ್ಠ ₹27 ಸಾವಿರಕ್ಕೆ ಹಾಗೂ ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ ₹1,04,600 ಇದ್ದು, ಅದನ್ನು ₹1,67,200ಕ್ಕೆ ಪರಿಷ್ಕರಿಸುವಂತೆ ಆಯೋಗ ಶಿಫಾರಸು ಮಾಡಿತ್ತು. ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದೆ.

ತಿಂಗಳ ಪಿಂಚಣಿಯನ್ನು ಮೂಲ ವೇತನದ ಶೇ 50ರಷ್ಟು, ಕುಟುಂಬ ಪಿಂಚಣಿಯನ್ನು ಶೇ 30ರಷ್ಟು ಮುಂದುವರಿಸಿದೆ. ಪಿಂಚಣಿಯು ಕನಿಷ್ಠ ₹13,500ರಿಂದ ₹1,20,600 ವರೆಗೆ ನಿಗದಿ ಮಾಡಿದೆ. 70–80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯು ಹೆಚ್ಚುವರಿ ಶೇ 10ರಷ್ಟು ಹೆಚ್ಚಳ ಆಗಬೇಕು ಎಂದು ಶಿಫಾರಸು ಮಾಡಲಾಗಿದೆ.

ಯಾವುದೆಲ್ಲ ಹೆಚ್ಚಳ?

* ವೇತನ ಶ್ರೇಣಿಗೆ ಅನುಗುಣವಾಗಿ, ವಾರ್ಷಿಕ ವೇತನ ಬಡ್ತಿ ದರ ಕನಿಷ್ಠ ₹400 ಇರುವವರಿಗೆ ಗರಿಷ್ಠ ₹650ಕ್ಕೆ ಹೆಚ್ಚಳ. ಕನಿಷ್ಠ ಇರುವವರಿಗೆ ₹3,100ರಿಂದ ₹5 ಸಾವಿರಕ್ಕೆ

* ಸಮವಸ್ತ್ರ ಭತ್ಯೆ, ಪ್ರಯಾಣ ಭತ್ಯೆ, ದಿನಭತ್ಯೆಗಳು ಶೇ 25ರಷ್ಟು ಹೆಚ್ಚಳ

* ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ₹1 ಸಾವಿರದಿಂದ ₹2 ಸಾವಿರಕ್ಕೆ ಹೆಚ್ಚಳ

* ಗೃಹ ನಿರ್ಮಾಣ ಮುಂಗಡ ₹40 ಲಕ್ಷದಿಂದ ₹65 ಲಕ್ಷದವರೆಗೆ ಹೆಚ್ಚಳ

* ಗ್ರೂಪ್‌ ಸಿ, ಡಿ ವೃಂದದ ವೈದ್ಯಕೀಯ ಭತ್ಯೆ ₹200ರಿಂದ ₹500ಕ್ಕೆ ಹೆಚ್ಚಳ

ಸರ್ಕಾರಿ ನೌಕರರಿಗೆ ಜುಲೈ 2022ರಿಂದ ಕಾಲ್ಪನಿಕವಾಗಿ ವೇತನ ನಿಗದಿ ಮಾಡಿ, ಆಗಸ್ಟ್‌ 2024ರಿಂದ ಆರ್ಥಿಕ ಸೌಲಭ್ಯವನ್ನು ನೀಡಲು ಆಯೋಗ ಮಾಡಿದ ಶಿಫಾರಸಿನಂತೆ ಶೇ 27.50 ವೇತನ ನಿಗದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆ
-ಸಿ.ಎಸ್‌. ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.