ADVERTISEMENT

ತೀವ್ರ ಬರ, ಬೆಳೆಹಾನಿ, ಕೈಗೆ ಸಿಗದ ಫಸಲು: 15 ತಿಂಗಳಲ್ಲಿ 1,182 ರೈತರ ಆತ್ಮಹತ್ಯೆ

ರಾಜೇಶ್ ರೈ ಚಟ್ಲ
Published 7 ಜುಲೈ 2024, 22:54 IST
Last Updated 7 ಜುಲೈ 2024, 22:54 IST
   

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ, ಬೆಳೆ ಹಾನಿ, ಕೈಗೆ ಸಿಗದ ಫಸಲು, ಸಾಲದ ಹೊರೆ ಹೀಗೆ ನಾನಾ ಕಾರಣಗಳಿಗೆ 2023 ಏಪ್ರಿಲ್‌ 1ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 15 ತಿಂಗಳಲ್ಲಿ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳ ಸಮಗ್ರ ವಿವರಗಳನ್ನು ಕಂದಾಯ ಇಲಾಖೆ ಸಂಗ್ರಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ (ಜುಲೈ 8) ಮತ್ತು ಮಂಗಳವಾರ (ಜುಲೈ 9) ನಡೆಯಲಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ಮಾಹಿತಿಯನ್ನು ಸಲ್ಲಿಸಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 122, ಹಾವೇರಿಯಲ್ಲಿ 120, ಧಾರವಾಡದಲ್ಲಿ 101 ರೈತರು ಸಾವಿನ ಮೊರೆ ಹೋಗಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿಲ್ಲ.

ADVERTISEMENT

ಒಟ್ಟು 1,003 ಆತ್ಮಹತ್ಯೆ ಪ್ರಕರಣಗಳಲ್ಲಿ ರೈತನ ಕುಟುಂಬ ಪರಿಹಾರಧನ ಪಡೆಯಲು ಅರ್ಹ ಎಂದು ಪರಿಗಣಿಸಲಾಗಿದೆ. ವಿವಿಧ ಕಾರಣಗಳಿಗಾಗಿ 161 ಪ್ರಕರಣಗಳು ಅರ್ಹವಲ್ಲವೆಂದು ತಿರಸ್ಕರಿಸಲಾಗಿದೆ. ಈ ಪೈಕಿ, ಈಗಾಗಲೇ 994 ರೈತರ ಕುಟುಂಬಗಳಿಗೆ ಪರಿಹಾರಧನ ವಿತರಿಸಲಾಗಿದೆ. ಒಂಬತ್ತು ಪ್ರಕರಣಗಳಲ್ಲಿ ಪರಿಹಾರಧನ ವಿತರಿಸಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಬಾಕಿ ಉಳಿದಿದೆ. 18 ಪ್ರಕರಣಗಳಲ್ಲಿ ಪರಿಹಾರ ಧನ ವಿತರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲು ಬಾಕಿಯಿದೆ ಎಂದೂ ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈಕೊಟ್ಟ ಮಳೆ, ಬೆಳೆ ಹಾನಿಯ ಪರಿಣಾಮ ಬ್ಯಾಂಕ್ ಸಾಲ ಮರು ಪಾವತಿಸಲಾಗದೆ ಬಹುತೇಕ ರೈತರು ನೇಣಿಗೆ ಕೊರಳೊಡ್ಡಿದ್ದಾರೆ. ಕೆಲವರು ತಮ್ಮ ಹೊಲದಲ್ಲಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಅನ್ನದಾತರು ಈ ರೀತಿಯ ಮನನೊಂದು ಆತ್ಮಹತ್ಯೆಯಂಥ ದಾರಿ ತುಳಿಯಲು ಕಾರಣವೇನೆಂಬ ಬಗ್ಗೆ ಸಮರ್ಪಕ ಅಧ್ಯಯನ ನಡೆಸಬೇಕಾದ ಅಗತ್ಯವಿದೆ’ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೆಬ್ಬುತಿ ಗ್ರಾಮದ ರೈತರೊಬ್ಬರು ಸಹಕಾರಿ ಬ್ಯಾಂಕ್‌ನಲ್ಲಿ ಪಡೆದಿದ್ದ ₹3 ಲಕ್ಷ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣಕ್ಕೆ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾಲ ಮಾಡಿ ಒಂದು ಎಕರೆ 34 ಗುಂಟೆ ಜಮೀನಿನಲ್ಲಿ ಭತ್ತ ಹಾಗೂ ಅಡಿಕೆ ಬೆಳೆದಿದ್ದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಳೆದ ಅತೀ ಕಡಿಮೆ ಮಳೆಯಾಗಿದೆ. 

ಮಳೆಯಿಲ್ಲದೆ ಈರುಳ್ಳಿ ಬೆಳೆ ಹಾನಿಯಿಂದ ಮನನೊಂದು ಕಡೂರು ತಾಲ್ಲೂಕಿನ ಗಿರಿಯಾಪುರ ರೈತರೊಬ್ಬರು ತಮ್ಮ ಹೊಲದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯಲು ಸಾಲ ಮಾಡಿಕೊಂಡಿದ್ದರು. ಆದರೆ, ಕಳೆದ ವರ್ಷ ಮುಂಗಾರು ವೈಫಲ್ಯ ಮತ್ತು ಬರಗಾಲ ಪರಿಸ್ಥಿತಿಯಿಂದಾಗಿ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು. ಇದರಿಂದ ತಮ್ಮ ಜಮೀನಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಅವರು ಹೇಳಿದರು.

ಯಾದಗಿರಿ ಜಿಲ್ಲೆಯ ಹುಣಸೂರು ತಾಲ್ಲೂಕಿನ ಉಡುವೆಪುರ ಗ್ರಾಮದ ರೈತರೊಬ್ಬರು ಬ್ಯಾಂಕಿನಿಂದ ಪಡೆದ ಸಾಲ ಮತ್ತು ಗ್ರಾಮಸ್ಥರಿಂದಲೂ ಮಾಡಿದ್ದ ಕೈಸಾಲ ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರೆ, ಎಸ್‌ಬಿಐ ಬ್ಯಾಂಕಿನಿಂದ ₹3 ಲಕ್ಷ ಬೆಳೆ ಸಾಲ ಪಡೆದಿದ್ದ ಬ್ಯಾಡಗಿಯ ತಾಲ್ಲೂಕಿನ ತಿಪಲಾಪುರ ಗ್ರಾಮದ ರೈತರೊಬ್ಬರು, ಕಳೆದ ವರ್ಷ ಮಳೆಯಾಗದ ಕಾರಣಕ್ಕೆ ನಷ್ಟ ಅನುಭವಿಸಿದ್ದರು. ಇದರಿಂದ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆ, ಬಹುತೇಕ ರೈತರು ಸಾಲಬಾಧೆಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆರಳೆಣಿಕೆಯ ರೈತರಷ್ಟೆ ವೈಯಕ್ತಿಕ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ. ರೈತರು ಸಾಲ ಮರುಪಾವತಿ ವಿಚಾರದಲ್ಲಿ ಸಂಯಮ ವಹಿಸುವಂತೆ ಮತ್ತು ಸಂದರ್ಭಕ್ಕೆ ಅನುಸಾರ  ಸಾಲ ಮರುಪಾವತಿಗೆ ಅವಕಾಶ ನೀಡುವಂತೆ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದರೂ ಕೆಲವು ಬ್ಯಾಂಕುಗಳ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಾರೆ. ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಇದೂ ಕಾರಣ ಎಂದೂ ಅವರು ವಿವರಿಸಿದರು.

ಬೆಳೆ ವಿಮೆ ನೋಂದಣಿಗೆ ಅವಕಾಶ

‘ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟವಾದರೆ ಬೆಳೆ ವಿಮೆ ಪರಿಹಾರ ನೀಡಲಾಗುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ಬೆಳೆ ವಿಮೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. 2024–25ನೇ ಸಾಲಿನಲ್ಲಿ ಬೆಳೆ ವಿಮೆಗೆ 19.43 ಲಕ್ಷ ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ. 2024ರ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆಗೆ 5.08 ಲಕ್ಷ ರೈತರು ನೋಂದಾಯಿಸಿಕೊಂಡಿದ್ದರು’ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಆದಾಯ ಕಡಿಮೆ ಕೃಷಿ ವೆಚ್ಚ ಹೆಚ್ಚಿದ ಕಾರಣ ಬ್ಯಾಂಕ್‌ ಸಾಲ ಮರುಪಾವತಿ ರೈತನಿಂದ ಸಾಧ್ಯವಾಗುತ್ತಿಲ್ಲ. ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರವೇ ವ್ಯವಸ್ಥಿತವಾದ ಕೃಷಿ ಸಂಬಂಧಿ ಯೋಜನೆಗಳನ್ನು ರೂಪಿಸುವ ಮೂಲಕ ರೈತರ ಕೈಹಿಡಿಯದೇ ಇದ್ದರೆ ಆತ್ಮಹತ್ಯೆ ಪ್ರಕರಣಗಳಿಗೆ ತಡೆ ಅಸಾಧ್ಯ. ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದರವನ್ನು ಸರ್ಕಾರ ದೊರಕಿಸಿಕೊಡಬೇಕು
ಸಿದಗೌಡ ಮೋದಗಿ ರಾಜ್ಯ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) 
ರೈತರ ಬದುಕು ಹಸನುಗೊಳಿಸಲು ಕೇಂದ್ರ–ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಲು ಗಂಭೀರ ಪ್ರಯತ್ನಗಳನ್ನು ಮಾಡದೇ ಇದ್ದರೆ ಆತ್ಮಹತ್ಯೆ ಪ್ರಕರಣಗಳು ಇನ್ನಷ್ಟು ಹೆಚ್ಚಲಿದೆ.‌ ಆರ್ಥಿಕವಾಗಿ ಕುಗ್ಗಿರುವ ರೈತರನ್ನು ಮೇಲೆತ್ತಲು ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲ ಬೆಳೆಗಳಿಗೆ ವಿಸ್ತರಿಸಬೇಕು. ರಾಜ್ಯದಲ್ಲಿರುವ ಕೃಷಿ ಬೆಳೆ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಿ ಸ್ವಾಯತ್ತೆ ನೀಡುವ ಮೂಲಕ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಮುಂದಾಗಬೇಕು
ಬಡಗಲಪುರ ನಾಗೇಂದ್ರ ಅಧ್ಯಕ್ಷ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.