ಬೆಂಗಳೂರು: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಬಂಧಿಸಿ ಎಸ್‌ಐಟಿ ಕಚೇರಿಗೆ ಕರೆತಂದಿದ್ದಾರೆ.
ಈ ವೇಳೆ ಎಸ್‌ಐಟಿ ಅಧಿಕಾರಿಗಳು ಮಹಿಳಾ ಪೊಲೀಸರನ್ನೇ ಕಳುಹಿಸಿ ಪ್ರಜ್ವಲ್ ಅವರನ್ನು ಬಂಧಿಸಿದ್ದಾರೆ. ಪ್ರಜ್ವಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೆ ಎಸ್‌ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಮನ್ ಪನ್ನೇಕರ್ ಹಾಗೂ ಸೀಮಾ ಲಾಟ್ಕರ್ ಅವರ ಮುಂದಾಳತ್ವದ ಮಹಿಳಾ ತಂಡ ಅರೆಸ್ಟ್ ವಾರೆಂಟ್ ನೀಡಿ ಬಂಧಿಸಿತು ಎಂದು ತಿಳಿದು ಬಂದಿದೆ.
ಪ್ರಜ್ಞಾಪೂರ್ವಕವಾಗಿಯೇ ಮಹಿಳಾ ಪೊಲೀಸರನ್ನು ಕಳುಹಿಸಿ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ಬಳಿಕ ನಮ್ಮ ಮಹಿಳಾ ಪೊಲೀಸರೇ ಪ್ರಜ್ವಲ್‌ರನ್ನು ಕಾರಿನಲ್ಲಿ ಕಚೇರಿಗೆ ಕರೆತಂದರು ಎಂದು ಎಸ್‌ಐಟಿ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಪ್ರಜ್ವಲ್‌ಗೆ ಸ್ಪಷ್ಟ ಸಂದೇಶ ಕಳಿಸಲೆಂದೇ ಮಹಿಳಾ ಪೊಲೀಸರನ್ನು ಕಳಿಸಲಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯ ಮತದಾನದ ನಂತರ ದೇಶದಿಂದ ಪರಾರಿಯಾಗಿದ್ದ ಪ್ರಜ್ವಲ್, 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.