ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಅಪಹರಣದ ಪ್ರಕರಣದಲ್ಲಿನ ಅರ್ಜಿದಾರ ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರಕ್ತ ಸಂಬಂಧಿಗಳಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರೂ ರಾಜಕೀಯವಾಗಿ ಒಂದಲ್ಲ ಒಂದು ಸ್ಥಾನಮಾನ ಹೊಂದಿದವರೇ’ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಅರುಹಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಆರೋಪಿಗಳಾದ ಹಾಸನದ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣ, ಎಚ್.ಕೆ.ಸುಜಯ್, ಎಚ್.ಎನ್.ಮಧು, ಎಸ್.ಟಿ.ಕೀರ್ತಿ, ಎಚ್.ಡಿ.ಮಾಯುಗೌಡ, ಕೆ.ಎ.ರಾಜಗೋಪಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಶೇಷ ಪ್ರಾಸಿಕ್ಯೂಟರ್ ರವಿರ್ಮ ಕುಮಾರ್, ‘ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಎಚ್.ಡಿ.ರೇವಣ್ಣ ಮತ್ತು ಭವಾನಿ ದಂಪತಿಯ ಸಂಬಂಧಿಗಳಾಗಿದ್ದಾರೆ. ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದ್ದು, ರಾಜಕೀಯ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದವರು. ಸಂತ್ರಸ್ತೆ ಅಪಹರಣದ ಬಗ್ಗೆ ಆಕೆಯ ಪುತ್ರ ದೂರು ನೀಡುತ್ತಿದ್ದಂತೆ ಆಕೆಯಿಂದಲೇ ಅಪಹರಣವಾಗಿಲ್ಲ ಎಂಬ ವಿಡಿಯೊ ಹೇಳಿಕೆಯನ್ನು ಆರೋಪಿಗಳು ಬಿಡುಗಡೆ ಮಾಡಿಸಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ, ಅಪಹರಣದ ವಿಚಾರ ತಿಳಿಯುತ್ತಿದ್ದಂತೆಯೇ ಎಲ್ಲ ಆರೋಪಿಗಳು ಸಂತ್ರಸ್ತೆಯನ್ನು ಮತ್ತೊಂದು ಸ್ಥಳದಲ್ಲಿ ಗೋಪ್ಯವಾಗಿ ಇರಿಸಲು ಯತ್ನಿಸಿದ್ದರು ಎಂಬ ವಿಚಾರ ಫೋನ್ ಕರೆಗಳ ದಾಖಲೆಗಳಿಂದ ತಿಳಿದು ಬಂದಿದೆ. ಸಂತ್ರಸ್ತೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲು ಪ್ರತ್ಯೇಕ ವಾಹನಗಳನ್ನು ಬಳಕೆ ಮಾಡಲಾಗಿದೆ’ ಎಂದರು.
ಇದೇ ವೇಳೆ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಸಂಪುಟಗಳಲ್ಲಿ ತನಿಖೆಯ ವಿವರ, ಕರೆ ದಾಖಲೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪ್ರತಿಯೊಬ್ಬ ಆರೋಪಿಯ ಬಗೆಗಿನ ಆರೋಪಗಳೇನು ಎಂಬುದನ್ನು ಒಳಗೊಂಡ ದೋಷಾರೋಪ ಪಟ್ಟಿಯ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಎಚ್.ಡಿ.ರೇವಣ್ಣ ಜಾಮೀನು ರದ್ದತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ. ಅದರ ಜೊತೆಗೇ ಈ ಜಾಮೀನು ಅರ್ಜಿಗಳ ಆದೇಶ ಪ್ರಕಟಿಸಲಾಗುವುದು’ ಎಂದು ಹೇಳಿತು. ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ಎಚ್.ಜಾಧವ್ ಮತ್ತು ಗಣಪತಿ ಭಟ್ ವಜ್ರಾಲಿ, ವಿ.ಎಸ್.ಹೆಗಡೆ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.