ADVERTISEMENT

ಗ್ರಂಥಾಲಯ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ: ಆರೋಪ ದೃಢಪಡಿಸಿದ ಸಮಿತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 23:43 IST
Last Updated 11 ನವೆಂಬರ್ 2024, 23:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮದೇ ಇಲಾಖೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ’ ಎಂದು ಈ ಬಗ್ಗೆ ರಚಿಸಲಾಗಿದ್ದ ಆಂತರಿಕ ದೂರು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

ಸಂತ್ರಸ್ತೆಯೊಬ್ಬರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಲಾ ಶಿಕ್ಷಣ ಮತ್ತು ಗ್ರಂಥಾಲಯ ಇಲಾಖೆ ರಚಿಸಿದ್ದ ಆಂತರಿಕ ದೂರು ಸಮಿತಿ, ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿತ್ತು. ವಿಚಾರಣೆಯ ವಿವರಗಳನ್ನು ಒಳಗೊಂಡ 70 ಪುಟಗಳ ವರದಿ ಇಲಾಖೆಗೆ ಸಲ್ಲಿಕೆ ಯಾಗಿತ್ತು. ವರದಿಯನ್ನು ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ADVERTISEMENT

‘ಹೊಸಮನಿ ಹಾಗೂ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಎಚ್‌. ಚಂದ್ರಶೇಖರ್ ಹಾಗೂ ಗ್ರಂಥಾಲಯ ಸಹಾಯಕ ಎಚ್‌.ಜಿ. ನಾರಾಯಣಮೂರ್ತಿ ಅವರು ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡು, ಕಚೇರಿ ಕೆಲಸದ ಅನುಕೂಲ ಮಾಡಿಕೊಡುವುದಾಗಿ ಆಮಿಷ ಒಡ್ಡುವ, ಶಿಸ್ತುಕ್ರಮ ಕೈಗೊಳ್ಳುವಾಗಿ ಬೆದರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದರು.

‌ಕಿರುಕುಳಕ್ಕೆ ರಸೀದಿ ಕಳವು ನೆಪ:

‘2022–23 ಅವಧಿಯಲ್ಲಿ ಹೊಸ ಕಚೇರಿಗೆ ಸ್ಥಳಾಂತರವಾಗುವಾಗ ಕಳೆದುಹೋಗಿದ್ದ ರಸೀದಿ ಪುಸ್ತಕದ ಪ್ರಕರಣವನ್ನೇ ನೆಪವಾಗಿಟ್ಟುಕೊಂಡ ಆರೋಪಿಗಳು ಒಬ್ಬರಾದ ಮೇಲೆ ಒಬ್ಬರು ಲೈಂಗಿಕ ಕಿರುಕುಳ
ನೀಡಿದ್ದಾರೆ. ಕಳೆದುಹೋಗಿರುವ ರಸೀದಿ ಪುಸ್ತಕಕ್ಕೆ ಪರ್ಯಾಯವಾಗಿ ₹20 ಸಾವಿರ ದಂಡ ಪಾವತಿಸಬೇಕು ಎಂದು ಒತ್ತಡ ಹಾಕಿದ್ದಾರೆ. ದಂಡದ ಹಣ ಪಾವತಿಸಲು ಸಾಧ್ಯವಾಗದಿದ್ದರೆ ತಾವು ಹೇಳಿದಂತೆ ಕೇಳಬೇಕು. ಖಾಸಗಿಯಾಗಿ ಸಹಕರಿಸಬೇಕು. ರಾತ್ರಿ ಊಟದ ವ್ಯವಸ್ಥೆ ಮಾಡಬೇಕು. ಖಾಸಗಿ ಕೊಠಡಿಗೆ ಬರಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ ಎನ್ನುವುದು ದೂರುದಾರ ಮಹಿಳೆಯ ನೀಡಿದ ವಿವರಗಳು, ಸಾಕ್ಷಿದಾರರ ಹೇಳಿಕೆಗಳಿಂದಲೂ ಸಾಬೀತಾಗಿದೆ’ ಎಂದು ಸಮಿತಿ ತನ್ನ 70 ಪುಟಗಳ ವಿಚಾರಣಾ ವರದಿಯಲ್ಲಿ ವಿವರಿಸಿದೆ.

‘ಮಹಿಳೆ ಜತೆ ಪದೇಪದೇ ಅಸಭ್ಯವಾಗಿ ವರ್ತಿಸುವುದು, ಮುಟ್ಟುವುದು, ಮಾತು ಹಾಗೂ ಹಾವಭಾವಗಳ ಮೂಲಕ ಲೈಂಗಿಕ ಚೇಷ್ಟೆ ನಡೆಸಿದ್ದಾರೆ. ರಾಜಕೀಯ ಪ್ರಭಾವ ಬಳಸಿಕೊಂಡು ಅನನುಕೂಲ ಮಾಡುವ ಬೆದರಿಕೆ ಹಾಕಿದ್ದಾರೆ. ಸ್ಪಂದಿಸದೇ ಇದ್ದಾಗ ವೇತನ ಬಡ್ತಿ, ಸೌಲಭ್ಯಗಳಿಗೆ ತಡೆ ಹಾಕಿದ್ದಾರೆ’ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

‘ದೂರುದಾರರು ಮಾಡಿರುವ ಆರೋಪ ಸತ್ಯಕ್ಕೆ ದೂರ. ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿತ್ತು. ವೇತನಬಡ್ತಿಗೆ ತಡೆ ಹಾಕಲಾಗಿತ್ತು. ಅದಕ್ಕಾಗಿ ಆರ್‌ಟಿಐ ಕಾರ್ಯಕರ್ತರೊಬ್ಬರ ಕುಮ್ಮಕ್ಕಿನಂತೆ ಲೈಂಗಿಕ ಕಿರುಕುಳದ ದೂರು ನೀಡಿದ್ದಾ‌ರೆ ಎಂದು ಮೂವರು ಅಧಿಕಾರಿಗಳೂ ಲಿಖಿತ ಹೇಳಿಕೆ ನೀಡಿದ್ದಾರೆ ಎಂದು’ ವರದಿಯಲ್ಲಿ ಮಾಹಿತಿ ನೀಡಲಾಗಿದೆ. 

ಮೂವರು ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ದೂರು ಕುರಿತು ಪರಿಶೀಲಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಬಿ.ಬಿ. ಕಾವೇರಿ ಅಧ್ಯಕ್ಷತೆಯಲ್ಲಿ ನಾಲ್ವರನ್ನು ಒಳಗೊಂಡ ಸಮಿತಿಯನ್ನು ನವೆಂಬರ್‌ 2023ರಲ್ಲಿ ರಚಿಸಲಾಗಿತ್ತು. ಮೂವರ ವಿರುದ್ಧ ನಡೆಸಿದ ವಿಚಾರಣಾ ವರದಿಯನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. 

ಹೊರಗೆ ಮಳೆ–ಒಳಗೆ ಕಿರುಕುಳ

‘ಹೊಸ ಕಚೇರಿಗೆ ಗ್ರಂಥಾಲಯ ಇಲಾಖೆ ಸ್ಥಳಾಂತರವಾದ ನಂತರ ವೀಕ್ಷಣೆಗೆ ಬರುವುದಾಗಿ ಉಪ ನಿರ್ದೇಶಕ ಎಚ್‌. ಚಂದ್ರಶೇಖರ್ ಸಂತ್ರಸ್ತ ಮಹಿಳೆಗೆ ಸೂಚನೆ ನೀಡಿದ್ದರು. ಕೆಲಸದ ಅವಧಿ ಮುಗಿದರೂ ಅವರನ್ನು ಹೊರಡಲು ಹೇಳಿಲ್ಲ. ಸಂಜೆ 7ರ ನಂತರ ಕಚೇರಿಗೆ ಬಂದಿದ್ದಾರೆ. ಆಗ ಹೊರಗೆ ಜೋರು ಮಳೆ ಬರುತ್ತಿತ್ತು, ಆ ಸಮಯದಲ್ಲಿ ಮಹಿಳೆ ದಾಖಲೆಗಳನ್ನು ತೆಗೆಯುತ್ತಿದ್ದಾಗ ಹಿಂದಿನಿಂದ ಬಂದ ಅಧಿಕಾರಿ ಅವರನ್ನು ಬಿಗಿದಪ್ಪಿ, ಸೊಂಟ ಚಿವುಟಿದ್ದಾರೆ. ಗಾಬರಿಗೊಂಡ ಮಹಿಳೆ ಅವರನ್ನು ಬಲವಾಗಿ ನೂಕಿದ್ದಾರೆ. ಇದರಿಂದ ಕುಪಿತಗೊಂಡ ಅಧಿಕಾರಿ ಅವರನ್ನು ನಿಂದಿಸಿದ್ದಾರೆ. ನಂತರದ ದಿನಗಳಲ್ಲಿ ಕಿರುಕುಳ ನೀಡುವುದನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ. ಸಾಕ್ಷಿದಾರರೂ ಇಂತಹ ನಡವಳಿಕೆಗಳನ್ನು ದೃಢೀಕರಿಸಿದ್ದಾರೆ’ ಎಂಬ ವಿವರಗಳೂ ವರದಿಯಲ್ಲಿವೆ.

‘ಆರೋಪಿಗಳ ಮಧ್ಯೆ ಹೊಂದಾಣಿಕೆ’

‘ದೂರು ನೀಡಿರುವ ಸಂತ್ರಸ್ತೆಗಷ್ಟೇ ಅಲ್ಲ, ಕಚೇರಿಯ ಹಲವು ಮಹಿಳಾ ಸಿಬ್ಬಂದಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಹಲವರು ಸಮಿತಿಯ ಮುಂದೆ ಸಾಕ್ಷಿ ಹೇಳಿದ್ದಾರೆ.

‘ಮೂವರು ಅಧಿಕಾರಿಗಳ ಮಧ್ಯೆ ಪರಸ್ಪರ ಹೊಂದಾಣಿಕೆ ಇದೆ. ಲಾಭದ ಉದ್ದೇಶಗಳಿಂದ ಒಗ್ಗಟ್ಟಾಗಿರುತ್ತಾರೆ. ಅಧಿಕಾರಿ ಹಂತದಿಂದ ಕೆಳ ಹಂತದ ಮಹಿಳಾ ಸಿಬ್ಬಂದಿಯನ್ನೂ ಬಿಡದೇ ಶೋಷಿಸಿದ್ದಾರೆ. ಸಹೋದ್ಯೋಗಿಗಳ ಜತೆ ಅನಪೇಕ್ಷಿತ ನಡವಳಿಕೆ ತೋರಿದ್ದಾರೆ. ಪ್ರಾಣಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ. ವೈವಾಹಿಕ  ಸ್ಥಿತಿಗತಿಗಳ ಬಗ್ಗೆ ಅವಹೇಳನ ಮಾಡಿದ್ದಾರೆ. ಹಲವರ ಜೀವನವನ್ನು ಹಾಳುಮಾಡಿದ್ದಾರೆ. ವಿವಾಹಿತ ಒಂಟಿ ಮಹಿಳೆಯರು, ಅವಿವಾಹಿತೆಯರನ್ನೇ ಗುರಿಯಾಗಿಸಿ ಕೊಂಡಿದ್ದಾರೆ. ಅವರ ಬೇಡಿಕೆಗಳಿಗೆ ಸಹಕರಿಸಿದ ಮಹಿಳಾ ಸಿಬ್ಬಂದಿಗೆ ಹೆಚ್ಚುವರಿ ಹುದ್ದೆಗಳ ಹೊಣೆಗಾರಿಕೆ ವಹಿಸಿ, ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹಲವರು ಸಮಿತಿಯ ಮುಂದೆ ನೋವು ತೋಡಿಕೊಂಡಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.