ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ದೂರು ಆಧರಿಸಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
‘ಆಡಿಯೊ ಹಾಗೂ ವಿಡಿಯೊಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿ ₹2 ಕೋಟಿಗೆ ಬೇಡಿಕೆಯಿಟ್ಟು ಸುಲಿಗೆಗೆ ಮುಂದಾಗಿದ್ದರು’ ಎಂದು ಆರೋಪಿಸಿ ವಿನಯ್ ಕುಲಕರ್ಣಿ ಪ್ರತಿದೂರು ನೀಡಿದ್ದಾರೆ. ಆ ದೂರು ಆಧರಿಸಿ ಪವರ್ ಟಿ.ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ದೂರು ನೀಡಿದ ಸಂತ್ರಸ್ತೆ ವಿರುದ್ಧವೂ ಸುಲಿಗೆ ಪ್ರಕರಣದ ಅಡಿ ಇದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ರೈತ ಹೋರಾಟ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನನಗೆ, 2022ರಲ್ಲಿ ವಿನಯ್ ಕುಲಕರ್ಣಿ ಅವರ ಪರಿಚಯವಾಗಿತ್ತು. ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಹೆಬ್ಬಾಳ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದೆ. ನಂತರ, ಅವರು ವಿಡಿಯೊ ಕರೆ ಮಾಡುತ್ತಿದ್ದರು. ರಾತ್ರಿ 11 ಗಂಟೆ ನಂತರ ಕರೆ ಮಾಡಿ ಮೊದಲು ಆರೋಗ್ಯ ವಿಚಾರಿಸುತ್ತಿದ್ದರು. ಮಧ್ಯರಾತ್ರಿ ನಗ್ನವಾಗಿ ವಿಡಿಯೊ ಕರೆ ಮಾಡಿ ನನ್ನನ್ನು ನೋಡು; ಇಬ್ಬರು ಸಿಗೋಣ ಎಂದು ಆಹ್ವಾನಿಸುತ್ತಿದ್ದರು. ನಾನು ನಿರಾಕರಿಸಿದಾಗ ರೌಡಿಗಳ ಮೂಲಕ ಬೆದರಿಕೆ ಹಾಕಿಸುತ್ತಿದ್ದರು’ ಎಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ದೇವನಹಳ್ಳಿ ಹಾಗೂ ಧರ್ಮಸ್ಥಳಕ್ಕೆ ಬಲವಂತದಿಂದ ಕರೆದೊಯ್ದು ಅತ್ಯಾಚಾರ ನಡೆಸಿ ಜೀವಬೆದರಿಕೆ ಹಾಕಿದ್ದರು’ ಎಂದು ಎಫ್‌ಐಆರ್ ಪ್ರತಿಯಲ್ಲಿ ವಿವರಿಸಲಾಗಿದೆ.
‘ರೌಡಿಗಳಿಂದ ಬೆದರಿಕೆ ಹಾಕಿಸಿದ್ದ ನಂತರ ವಿಧಿಯಿಲ್ಲದೇ ವಿನಯ್ ಕುಲಕರ್ಣಿ ಅವರ ಜತೆಗೆ ಸಂಭಾಷಣೆಗೆ ಒಪ್ಪಿಕೊಂಡಿದ್ದೆ. 2022ರ ಮಾರ್ಚ್, ಏಪ್ರಿಲ್‌ನಲ್ಲಿ ಬೆಳಗಾವಿ ಸರ್ಕಿಟ್ ಹೌಸ್‌ಗೆ ಬರಲು ಸೂಚಿಸಿದ್ದರು. ತುರ್ತು ಕೆಲಸ ಇರಬಹುದೆಂದು ಬಾಡಿಗೆ ಕಾರು ಪಡೆದು ಬೆಳಗಾವಿಗೆ ತೆರಳಿದ್ದೆ. ರಾತ್ರಿ 7.30ರಿಂದ 8 ಗಂಟೆ ಸುಮಾರಿಗೆ ಕೊಠಡಿಗೆ ಕರೆಸಿಕೊಂಡು ಹಿಂದಿನಿಂದ ತಬ್ಬಿಕೊಂಡಿದ್ದರು. ಬಿಡುವಂತೆ ಮನವಿ ಮಾಡಿದರೂ ಅವರ ವರ್ತನೆ ಮುಂದುವರೆಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
‘ಕೆಲಸದ ನಿಮಿತ್ತ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬೆಂಗಳೂರಿಗೆ ಬಂದಿದ್ದೆ. ಆಗ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ನಡೆಸಿ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.