ADVERTISEMENT

ಮುರುಘಾ ಮಠಕ್ಕೆ ಮರಳಿದ ಶರಣರು, ಭಕ್ತರಿಂದ ಸ್ವಾಗತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 8:27 IST
Last Updated 29 ಆಗಸ್ಟ್ 2022, 8:27 IST
   

ಚಿತ್ರದುರ್ಗ: ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಧ್ಯಾಹ್ನ 1.05ಕ್ಕೆ ಮಠಕ್ಕೆ ಮರಳಿದರು.

ಹಾವೇರಿಯಿಂದ ಕಾರಿನಲ್ಲಿ ಮರಳಿದ ಅವರನ್ನು ಮಠದ ಆವರಣದಲ್ಲಿ ಜಮಾಯಿಸಿದ್ದ ಅಪಾರ ಭಕ್ತರು ಸ್ವಾಗತ ಕೋರಿದರು. ಶಿವಮೂರ್ತಿ ಮುರುಘಾ ಶರಣರು ಹಾಗೂ ಮುರುಘಾ ಪರಂಪರೆಗೆ ಸಂಬಂಧಿಸಿದ ಘೋಷಣೆ ಮೊಳಗಿಸಿದರು.

ಮುರುಘಾ ಶರಣರ ಬಂಧನವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಅವರು ಬಹಿರಂಗವಾಗಿ ಕಾಣಿಸಿಕೊಂಡು ಊಹಾಪೋಹಗಳಿಗೆ ತೆರೆ ಎಳೆದರು. ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

'ಇದೊಂದು ಸಂಕಷ್ಟದ ಕಾಲ. ಇದನ್ನು ಧೈರ್ಯದಿಂದ ಎದುರಿಸಲು ಸಜ್ಜಾಗಿದ್ದೇವೆ. ಭಕ್ತರು ವಿಚಲಿತರಾಗುವ ಅಗತ್ಯ ಇಲ್ಲ. ಇಂತಹ ಸಮಸ್ಯೆಗಳು 15 ವರ್ಷದಿಂದ ಮಠದ ಒಳಗೆ ಇದ್ದವು. ಈಗಷ್ಟೇ ಇದು ಹೊರಗೆ ಬಿದ್ದಿದೆ' ಎಂದು ಹೇಳಿದರು.

'ಈ ಮಠದ ಕಾನೂನು ಗೌರವಿಸುವ ಮಠಾಧೀಶರು ನಾವು. ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಯಾವುದೇ ಪಲಾಯನವಾದ ಇಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು. ಶ್ರೀಮಠವು ಸಂಚಾರಿ ನ್ಯಾಯಾಲಯದ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ನ್ಯಾಯದ ಸ್ಥಾನದಲ್ಲಿ ಇರುವ ನಾವು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ' ಎಂದು ಹೇಳಿದರು.

'ಇದೊಂದು ಅಹಿತಕರ, ಅನಾರೋಗ್ಯಕರ ಸಂದರ್ಭ. ಈ ಸಂಕಷ್ಟದಿಂದ ಹೊರಗೆ ಬರುವ ಸಂಪೂರ್ಣ ವಿಶ್ವಾಸವಿದೆ. ಭಕ್ತರು ಸಮರೋಪಾದಿಯಲ್ಲಿ ಮಠಕ್ಕೆ ಬರುತ್ತಿದ್ದಾರೆ. ನೋವು, ಸಂಕಷ್ಟದ ಜೊತೆಯಲ್ಲಿ ನಿಂತಿರುವ ಭಕ್ತರಿಗೆ ಸೆಲ್ಯೂಟ್ ಹೊಡೆಯಬೇಕು' ಎಂದಾಗ ಭಕ್ತರು ಆಕ್ಷೇಪಿಸಿದರು. 'ನೀವು ಯಾರಿಗೂ ಸೆಲ್ಯೂಟ್ ಹೊಡೆಯುವ ಅಗತ ಇಲ್ಲ. ನಿಮ್ಮೊಂದಿಗೆ ನಾವಿ ಇದ್ದೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.