ಬೆಂಗಳೂರು: 'ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 'ಮೂರೂವರೆ ವರ್ಷ ಅಷ್ಟೇ ಅಲ್ಲ, ಮುಂದಿನ ಅವಧಿಗೂ ಈ ಯೋಜನೆ ಮುಂದುವರೆಯಲಿದೆ' ಎಂದರು.
'ಅಷ್ಟಕ್ಕೂ ಉಪ ಮುಖ್ಯಮಂತ್ರಿ ನನ್ನ ಬಳಿ ಅವರ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಈ ಯೋಜನೆಯನ್ನು ಪರಿಶೀಲಿಸುವ ಹೇಳಿಕೆ ನೀಡಿದ್ದಾರೆ. ಆದರೆ, ನನ್ನ ಬಳಿ ಈ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ' ಎಂದರು.
'ನನಗೆ ಯಾವ ಮಹಿಳೆಯರೂ ಬಸ್‌ನಲ್ಲಿ ದುಡ್ಡು ಕೊಟ್ಟು ಟಿಕೆಟ್ ಖರೀದಿಸುತ್ತೇವೆ ಎಂದು ಹೇಳಿಲ್ಲ. ಡಿ.ಕೆ. ಶಿವಕುಮಾರ್ ಅವರಿಗೆ ಮಹಿಳೆಯರು ಇ- ಮೇಲ್ ಮೂಲಕ ತಿಳಿಸಿದ್ದಾರಂತೆ. ಅದು ನನಗೆ ಗೊತ್ತಿಲ್ಲ. ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಮಹಿಳೆಯರಷ್ಟೇ ಇದನ್ನು ಹೇಳಿದ್ದಾರೆ. ಯಾಕೆಂದರೆ ಅವರಿಗೆ ಬಸ್‌ನ ಅಗತ್ಯ ಇರುವುದಿಲ್ಲ' ಎಂದರು.
ಅನಗತ್ಯವಾಗಿ ಗ್ಯಾರಂಟಿ ಯೋಜನೆಗಳ ಟೀಕೆ:
'ಬಿಜೆಪಿಯವರು ಅನಗತ್ಯವಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರಂತೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಯಶಸ್ವಿ ಯೋಜನೆಗಳನ್ನು ತಂದಿದೆ. ಇದನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಏನೇನೋ ಟೀಕೆ ಮಾಡುತ್ತಿದ್ದಾರೆ' ಎಂದರು.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, 'ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಗೆ ಬಂದಿರುವುದರಿಂದ ಶಕ್ತಿ ಬಂದಿದೆ. ಬಿಜೆಪಿಯಲ್ಲಿನ ಅಸಮಾಧಾನಿತರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆ. ಅವರಲ್ಲಿ ಅಸಮಾಧಾನ ಜೋರಾಗಿದೆ. ಹೀಗಾಗಿ ಅವರೆಲ್ಲ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ನಿರೀಕ್ಷೆಯಿದೆ' ಎಂದರು.
'ಚನ್ನಪಟ್ಟಣ ಒಂದೇ ಅಲ್ಲ, ಎಲ್ಲ ಮೂರೂ ಕ್ಷೇತ್ರಗಳಲ್ಲೂ ನಾವು ಗೆಲ್ಲತ್ತೇವೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಜನರು ನಮ್ಮ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ನಾನು ರಾಮನಗರ ಉಸ್ತುವಾರಿ ಸಚಿವನಾದರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ. ಚನ್ನಪಟ್ಟಣದಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಅಲ್ಲಿ ಗೆದ್ದೇ ಗೆಲ್ಲುತ್ತೇವೆ' ಎಂದರು.
'ನಿಖಿಲ್ ಕುಮಾರಸ್ವಾಮಿ ಸೋಲಿನಲ್ಲಿ ಕಾಂಗ್ರೆಸ್ ಷಡ್ಯಂತ್ರ ಎಲ್ಲಿದೆ? ಹಿಂದೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಅವರು ಸ್ಪರ್ಧಿಸಿದ್ದರು. ಆಗ ನಾವು ಷಡ್ಯಂತ್ರ ನಡೆಸಿದ್ದೇವೆಯೇ ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ನಿಂತು ಸೋತರು. ಸಿ.ಪಿ ಯೋಗೇಶ್ವರ್ ಮೂಲತಃ ಚನ್ನಪಟ್ಟಣದವರೇ. ಮೊದಲು ಕುಮಾರಸ್ವಾಮಿ ಅಲ್ಲೇ ಶಾಸಕರಾಗಿದ್ದರು. ಈಗ ನಿಖಿಲ್ ಕುಮಾರಸ್ವಾಮಿ ಅಲ್ಲಿಗೆ ಬಂದಿದ್ದಾರೆ. ದೇವೇಗೌಡರು ಅವರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿ. ಬೇಡ ಎನ್ನಲು ನಾವ್ಯಾರು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.