ADVERTISEMENT

ಜಾತಿ ಜನಗಣತಿಗೆ ವೀರಶೈವ–ಲಿಂಗಾಯತರ ವಿರೋಧ: ಬೆಂಗಳೂರಿನಲ್ಲಿ ಅ.22ರಂದು ಸಭೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 21:27 IST
Last Updated 18 ಅಕ್ಟೋಬರ್ 2024, 21:27 IST
<div class="paragraphs"><p>ಶಾಮನೂರು ಶಿವಶಂಕರಪ್ಪ</p></div>

ಶಾಮನೂರು ಶಿವಶಂಕರಪ್ಪ

   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಬಹಿರಂಗಕ್ಕೆ ವೀರಶೈವ–ಲಿಂಗಾಯತ ಸಮುದಾಯ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಚರ್ಚಿಸಲು ಹೋಟೆಲ್‌ ರ್‍ಯಾಡಿಷನ್‌ ಬ್ಲೂ (ಏಟ್ರಿಯಾ) ಹೋಟೆಲ್‌ನಲ್ಲಿ ಅ. 22ರಂದು ಸಭೆ ಕರೆಯಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಂದು ಸಂಜೆ 5ಕ್ಕೆ ನಡೆಯುವ ಸಭೆಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ಸಮುದಾಯದ ಮುಖಂಡರಿಗೆ ಆಹ್ವಾನ ನೀಡಲಾಗಿದೆ. 

ADVERTISEMENT

‘ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಸಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಗುಳೆ ಹೋದವರನ್ನು ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ. ವೀರಶೈವ– ಲಿಂಗಾಯತರಲ್ಲೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡರೆ ಸಮುದಾಯದ ಲಕ್ಷಾಂತರ ಮಂದಿಗೆ ಅನ್ಯಾಯವಾಗುತ್ತದೆ’ ಎಂದು ಕಾಂಗ್ರೆಸ್‌ ಶಾಸಕರೂ ಆಗಿರುವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ. 

ಹಿಂದುಳಿದ ವರ್ಗಗಳನ್ನು ಗುರುತಿಸುವ ಗಣತಿಗೆ ಮಹಾಸಭಾದ ವಿರೋಧವಿಲ್ಲ. ಈ ಸಮೀಕ್ಷೆಯ ಅಂಕಿಅಂಶಗಳನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡಲಾಗಿದೆ. ಕೇವಲ ಜಾತಿವಾರು ಜನಸಂಖ್ಯೆಯನ್ನು ಸೋರಿಕೆ ಮಾಡಿ ಗೊಂದಲ ಮೂಡಿಸಲಾಗಿದೆ. ಗಣತಿದಾರರು ವೀರಶೈವ– ಲಿಂಗಾಯತ ಸಮುದಾಯದ ಶೇಕಡ 50ರಷ್ಟು ಮನೆಗಳಿಗೆ ಭೇಟಿ ನೀಡಿಲ್ಲ. ವರದಿಯ ಹಲವು ಲೋಪಗಳಿಂದ ಕೂಡಿದೆ ಎಂಬ ಅನುಮಾನವಿದೆ ಎಂದು ಹೇಳಿದ್ದಾರೆ.

‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಬೇಕು. ರಾಷ್ಟ್ರೀಯ ಮಟ್ಟದಲ್ಲೂ ಜಾತಿ ಗಣತಿ ನಡೆಸುವ ಚರ್ಚೆ ನಡೆಯುತ್ತಿದೆ. ಅಲ್ಲಿನ ಬೆಳವಣಿಗೆಯನ್ನು ನೋಡಿಕೊಂಡು ರಾಜ್ಯ ಸರ್ಕಾರ ಮುನ್ನಡೆಯಬೇಕು. ಈ ಕುರಿತು ಅ. 22ರಂದು ನಡೆಯುವ ಸಭೆಯಲ್ಲಿ ಸಮುದಾಯದ ಎಲ್ಲ ಮುಖಂಡರು ಒಮ್ಮತದ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸಚಿವ ಸಂಪುಟ ಸಭೆಗೆ ವರದಿ ಅನುಮಾನ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವುದರಿಂದ ಅ.25ರಂದು ನಡೆಯುವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿಯನ್ನು ಮಂಡಿಸಿ, ಚರ್ಚೆ ನಡೆಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹಿಂದುಳಿದ ವರ್ಗಗಳ ಸಂಘಟನೆಯ ಹಲವು ನಾಯಕರು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದ್ದರು. ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದರು.

ಉಪ ಚುನಾವಣೆಯು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಈ ಹಂತದಲ್ಲಿ ವರದಿಯನ್ನು ಸಂಪುಟ ಸಭೆ ಮುಂದೆ ತಂದರೆ, ಚುನಾವಣೆಯಲ್ಲಿ ವಿರೋಧ ಪಕ್ಷಗಳು ಅದನ್ನೇ ಅಸ್ತ್ರವಾಗಿ ಬಳಸುವ ಸಂಭವ ಇದೆ. ಹೀಗಾದಾಗ, ಪ್ರಬಲ ಜಾತಿಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ಚುನಾವಣೆ ಮುಗಿಯುವವರೆಗೆ ಜಾತಿ ಜನಗಣತಿ ವರದಿಯನ್ನು ಸಂಪುಟದ ಮುಂದೆ ತರುವ ಸಾಧ್ಯತೆ ಕ್ಷೀಣ ಎಂದು ಸರ್ಕಾರದ ಮೂಲಗಳು ಹೇಳಿವೆ.

‘₹160 ಕೋಟಿ ವ್ಯರ್ಥವಾಗಬೇಕೇ?’

ಸರ್ಕಾರ ₹160 ಕೋಟಿ ಖರ್ಚು ಮಾಡಿ ಜಾತಿಗಣತಿ ಸಮೀಕ್ಷೆ ನಡೆಸಿದೆ. ಅಷ್ಟೊಂದು ಹಣ ಖರ್ಚು ಮಾಡಿದ ಮೇಲೆ ಜನಗಳಿಗೆ ಗೊತ್ತಾಗಬೇಕಲ್ಲವೇ ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರನ್ನ  ಭೇಟಿ ಮಾಡಿ ರುವುದು ಗೊತ್ತಿಲ್ಲ. ವರದಿಯನ್ನು ಸಚಿವ ಸಂಪುಟದ ಮುಂದೆ ತರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ‌. ಯಾವುದೇ ವಿಚಾರ ಇದ್ದರೂ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಪರ-ವಿರೋಧ ಇದ್ದೇ ಇರುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.