ನವದೆಹಲಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಶಾಂತ್ ತಿಮ್ಮಯ್ಯ ಅವರನ್ನು ವಜಾಗೊಳಿಸಿ ಸರ್ಕಾರವು 2023ರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಆದೇಶಕ್ಕೆ ದ್ವಿಸದಸ್ಯ ಪೀಠ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಂತ್ ಅವರನ್ನು ನೇಮಕ ಮಾಡಲಾಗಿತ್ತು. ಸರ್ಕಾರ ಬದಲಾಗಿದೆ ಎಂಬ ಕಾರಣಕ್ಕೆ ಹುದ್ದೆಯಿಂದ ವಜಾ ಮಾಡುವುದು ಸರಿಯಲ್ಲ. ಅವರ ಅಧಿಕಾರದ ಅವಧಿ ನವೆಂಬರ್‌ವರೆಗೆ ಇದೆ. ಅಲ್ಲಿಯವರೆಗೆ ಹುದ್ದೆಯಲ್ಲಿ ಮುಂದುವರಿಯಲಿ’ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.