ADVERTISEMENT

ವೈದ್ಯಕೀಯ ಕಾಲೇಜುಗಳಿಗೆ ಕೆಇಎ ಮೂಲಕ ನೇಮಕಾತಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 14:41 IST
Last Updated 7 ಆಗಸ್ಟ್ 2024, 14:41 IST
ಡಾ. ಶರಣಪ್ರಕಾಶ ಪಾಟೀಲ
ಡಾ. ಶರಣಪ್ರಕಾಶ ಪಾಟೀಲ   

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ 650 ಸಹಾಯಕ ಪ್ರಾಧ್ಯಾಪಕರು ಹಾಗೂ 1,200 ಶುಶ್ರೂಷಣಾ ಅಧಿಕಾರಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ನಡೆದ ಸಭೆಯ ನಂತರ ಅವರು ಮಾತನಾಡಿದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸ್ಪರ್ಧಾತಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕೆಇಎಗೆ ಪರೀಕ್ಷೆ ನಡೆಸಲು ಪ್ರಸ್ತಾವ ಕಳುಹಿಸಲಾಗುವುದು ಎಂದರು.

22 ವೈದ್ಯಕೀಯ ಕಾಲೇಜುಗಳು ಮತ್ತು 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಹಿಂದೆ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ನೇತೃತ್ವದ ಸಮಿತಿಗಳೇ ಸಹಾಯಕ ಪ್ರಾಧ್ಯಾಪಕರು ಹಾಗೂ ಶುಶ್ರೂಷಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದವು. ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ, ಬೈಲಾಗೆ ತಿದ್ದುಪಡಿ ಮಾಡಲಾಗುವುದು. ಆರೋಗ್ಯ ಇಲಾಖೆ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್‌ ನಿಯಮಗಳನ್ನು ಅನುಸರಿಸಲಾಗುವುದು. ಪ್ರಾಧಿಕಾರಕ್ಕೆ ಹೊಣೆಗಾರಿಕೆ ನೀಡಲಾಗುವುದು ಎಂದು ಹೇಳಿದರು.

ಪರೀಕ್ಷೆಗಳಿಗೆ ಅಗತ್ಯವಾದ ಪಠ್ಯಕ್ರಮಕ್ಕಾಗಿ ತಜ್ಞರ ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ಅವರಿಗೆ ಶರಣಪ್ರಕಾಶ ಪಾಟೀಲ ಸೂಚಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.