ಬೆಂಗಳೂರು: 'ಗುಪ್ತಚರ ಇಲಾಖೆ ತಮ್ಮ ಕೈಕೆಳಗೆ ಇದ್ದಾಗಲೇ ಜೈಲು ಸೇರಿದವರನ್ನು ಈಗ ಕಳಿಸುವುದು ಸಮ್ಮಿಶ್ರ ಸರ್ಕಾರಕ್ಕೆ ಕಷ್ಟವೇನಲ್ಲ’ ಎಂದು ಜೆಡಿಎಸ್ ವಕ್ತಾರ ಟಿ.ಎ.ಶರವಣ ಪರೋಕ್ಷವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ, 2008ರಿಂದ 2012ರವರೆಗೆ ಅವರ ಪಕ್ಷದ ನಾಯಕರು ಪರಪ್ಪನ ಅಗ್ರಹಾರಕ್ಕೆ ಪರೇಡ್ ನಡೆಸಿದ ದಿನಗಳು ಕಣ್ಮುಂದೆ ಬರುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿ ಮುಖಂಡರು ಜಾಣರಾಗಿರುವುದೇ ಹೌದಾದರೆ, ಈ ಮಾತು ಅರ್ಥ ಮಾಡಿಕೊಂಡು ಆಪರೇಷನ್ ಕಮಲದ ಪ್ರಯತ್ನ ನಿಲ್ಲಿಸುತ್ತಾರೆ. ದಡ್ಡರಾಗಿದ್ದರೆ ದೊಣ್ಣೆ ಏಟು ತಿನ್ನಲು ಸಜ್ಜಾಗುತ್ತಾರೆ’ ಎಂದರು.
‘ಸರ್ಕಾರ ಉರುಳಿಸಲು ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಿರುವ ಮಾಫಿಯಾ ಕಿಂಗ್‌ಪಿನ್‌ಗಳು ಬಿಜೆಪಿ ಜತೆ ಕೈಜೋಡಿಸಿದ್ದಾರೆ’ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಶರವಣ, ‘ಈ ಸಂಬಂಧ ದೂರು ದಾಖಲಿಸಲಿದ್ದೇವೆ. ತನಿಖೆ ಆರಂಭ ಆದಮೇಲೆ ಆ ಕಿಂಗ್‌ಪಿನ್‌ಗಳು ಯಾರು, ಸೇಫ್ಟಿಪಿನ್ ಯಾರು ಅನ್ನುವ ವಿಷಯ ತಿಳಿಸುತ್ತೇವೆ’ ಎಂದರು.
ಪಕ್ಷದ ವಕ್ತಾರ ಆರ್.ಪ್ರಕಾಶ್, ‘ಬಿಜೆಪಿಯವರು ಸರ್ಕಾರ ಉರುಳಿಸಲು ನಿರಂತರವಾಗಿವ್ಯರ್ಥ ಕಸರತ್ತು ನಡೆಸುತ್ತಲೇ ಇದ್ದಾರೆ. ಶಾಸಕರಿಗೆ ಭಾರಿ ಪ್ರಮಾಣದ ಆಮಿಷ ಒಡ್ಡುತ್ತಿದ್ದಾರೆ.ಶಾಸಕರ ಖರೀದಿಗಾಗಿ ಅವರು ಸಮಾಜಘಾತಕ ಶಕ್ತಿಗಳ ಜೊತೆ ಕೈ ಜೋಡಿಸಿರುವುದು ಖಂಡನೀಯ. ಅಧಿಕಾರ ಹಿಡಿಯಲು ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ಪ್ರಯತ್ನಗಳನ್ನು ಕುಮಾರಸ್ವಾಮಿ ಮಟ್ಟ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.