ADVERTISEMENT

ಶರಾವತಿ ಕಣಿವೆ: ಜಲವಿದ್ಯುತ್ ಮೇಲೆ ಗರಿಷ್ಠ ಅವಲಂಬನೆ

ಬೇಸಿಗೆಗೂ ಮೊದಲೇ ಅಧಿಕ ವಿದ್ಯುತ್ ಉತ್ಪಾದನೆ

ಚಂದ್ರಹಾಸ ಹಿರೇಮಳಲಿ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST
ಶರಾವತಿ ವಿದ್ಯುದಾಗಾರ
ಶರಾವತಿ ವಿದ್ಯುದಾಗಾರ   

ಶಿವಮೊಗ್ಗ: ಕಲ್ಲಿದ್ದಲು ಪೂರೈಕೆಯಲ್ಲಿನ ಕೊರತೆಯಿಂದಾಗಿ ರಾಜ್ಯದ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದ್ದು, ಶರಾವತಿ ಕಣಿವೆ ಜಲವಿದ್ಯುದಾಗಾರಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ.

ಕಣಿವೆ ಯೋಜನೆ ವ್ಯಾಪ್ತಿಯ ನಾಲ್ಕು ಘಟಕಗಳಿಂದ ನಿತ್ಯವೂ ಗರಿಷ್ಠ 1,200ರಿಂದ 1,400 ಮೆಗಾವಾಟ್‌ವರೆಗೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಒಂದು ದಶಕದಿಂದ ಈಚೆಗೆ ಬೇಸಿಗೆ ಸಮಯದಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಲೋಡ್‌ಶೆಡ್ಡಿಂಗ್ ಅನಿವಾರ್ಯವಾದಾಗ ಇಲ್ಲಿನ ಟರ್ಬೈನ್‌ಗಳು ಅವಿತರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಬಾರಿ ಬೇಸಿಗೆಗೂ ಮೊದಲೇ ಗರಿಷ್ಠ ಉತ್ಪಾದನೆ ಆರಂಭಿಸಲಾಗಿದೆ.

ADVERTISEMENT

44.35 ಕೋಟಿ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಜಲಾಶಯದ ನೀರು ಬಳಸಿಕೊಂಡು ಮಹಾತ್ಮಗಾಂಧಿ, ಶರಾವತಿ, ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಘಟಕಗಳು ಗರಿಷ್ಠ 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಈ ವಿದ್ಯುದಾಗಾರಗಳು 1964ರಿಂದ ಹಲವು ದಶಕಗಳು ರಾಜ್ಯದ ಬೇಡಿಕೆಯಲ್ಲಿ ಅಗ್ರಪಾಲು ವಿದ್ಯುತ್ ಪೂರೈಸುತ್ತಿದ್ದವು. ಬೇಡಿಕೆ ಗಣನೀಯವಾಗಿ ಹೆಚ್ಚಿದಂತೆ ಬೇರೆಬೇರೆ ಮೂಲಗಳಿಂದ ವಿದ್ಯುತ್ ಉತ್ಪಾದಿಸಲುಸರ್ಕಾರಗಳು ಕ್ರಮ ಕೈಗೊಂಡ ಪರಿಣಾಮಜಲ ವಿದ್ಯುತ್‌ ಮೇಲಿನ ಅವಲಂಬನೆ ಕಡಿಮೆಯಾಗಿತ್ತು. ಹಾಗಾಗಿ, ತುರ್ತು ಸಂದರ್ಭಗಳಪೂರೈಕೆಗೆ ಮೀಸಲಿಡಲಾಗಿತ್ತು.

ಅಧಿಕ ಸಾಮರ್ಥ್ಯದ ಶರಾವತಿ ಘಟಕ

ಎರಡು ವರ್ಷಗಳ ಹಿಂದೆ ಅಗ್ನಿ ಆಕಸ್ಮಿಕಕ್ಕೆ ತುತ್ತಾಗಿದ್ದ1,035 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಶರಾವತಿ ಜಲ ವಿದ್ಯುದಾಗಾರವನ್ನು 178 ದಿನಗಳಲ್ಲೇ ₹ 42 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿತ್ತು. ವಿದ್ಯುದಾಗಾರದ 10 ಘಟಕಗಳಿಂದ ಪ್ರಸ್ತುತ 900ರಿಂದ 950ಮೆಗಾವಾಟ್‌ವರೆಗೂ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 220 ಕೆ.ವಿ. ಸಾಮರ್ಥ್ಯದ 9 ಮಾರ್ಗಗಳ ಮೂಲಕ ವಿದ್ಯುತ್‌ ಹರಿಸಲಾಗುತ್ತಿದೆ.

ಕುಡಿಯುವ ನೀರು ಪೂರೈಕೆಗೆ ಮತ್ತೆ ವಿರೋಧ

ವಿದ್ಯುತ್ ಅಭಾವದ ಕಾರಣ ಬೆಂಗಳೂರು ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಯೋಜನೆ ಪ್ರಸ್ತಾವ ಸಂಪುರ್ಣ ತಿರಸ್ಕರಿಸಬೇಕು ಎನ್ನುವ ವಿವಿಧ ಸಂಘಟನೆಗಳ ಒತ್ತಾಯಕ್ಕೆ ಮತ್ತೆ ಬಲ ಬಂದಿದೆ. ಜಲಾಶಯ ಸಂಪೂರ್ಣ ಭರ್ತಿಯಾದರೆ 151 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. 50 ಟಿಎಂಸಿ ಅಡಿ ಕುಡಿಯುವ ಯೋಜನೆಗೆ ಬಳಸಿಕೊಂಡರೆ 150ರಿಂದ 200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ.

‘ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುವ ಜತೆಗೆ, ಬೆಂಗಳೂರಿಗೆ ನೀರು ಪಂಪ್‌ ಮಾಡಲು ಅಪಾರ ಪ್ರಮಾಣದ ವಿದ್ಯುತ್ ವೆಚ್ಚವಾಗುತ್ತದೆ. ಯೋಜನೆ ಕೈಬಿಟ್ಟು ಜಲಾಶಯದ ನೀರು ವಿದ್ಯುತ್ ಉತ್ಪಾದನೆಗೆ ಮೀಸಲಿಡಬೇಕು’ ಎಂದು ಆಗ್ರಹಿಸುತ್ತಾರೆ ಪರಿಸರವಾದಿ ಪ್ರೊ.ಬಿ.ಎಂ. ಕುಮಾರಸ್ವಾಮಿ.

ಯೂನಿಟ್‌ಗೆ 24.18 ಪೈಸೆ

ಶರಾವತಿ ವಿದ್ಯುದಾಗಾರದಲ್ಲಿ ಉತ್ಪಾದಿಸುವ ಒಂದು ಯೂನಿಟ್‌ ವಿದ್ಯುತ್‌ಗೆ ತಗುಲುವ ವೆಚ್ಚ 24.18 ಪೈಸೆ. ಪ್ರತಿ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು 9 ಕ್ಯೂಸೆಕ್‌.

ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಸರ್ಚ್‌ ಟ್ಯಾಂಕ್‌ ಮೂಲಕ ಪ್ರತ್ಯೇಕ 10 ಪೈಪ್‌ಗಳಮೂಲಕ ವಿದ್ಯುದಾಗಾರಕ್ಕೆ ನೀರುಪೂರೈಸಲಾಗುತ್ತದೆ.

* ರಾಜ್ಯದಲ್ಲಿ ಪ್ರತಿದಿನ 9 ಸಾವಿರ ಮೆಗಾವಾಟ್ ಬೇಡಿಕೆ ಇದೆ. ಕಲ್ಲಿದ್ದಲು ಕೊರತೆ ಕಾರಣ ಶಾಖೋತ್ಪನ್ನ ಘಟಕಗಳು ನಿರೀಕ್ಷಿತ ವಿದ್ಯುತ್ ಉತ್ಪಾದಿಸುತ್ತಿಲ್ಲ. ಶೇ 15ರಷ್ಟು ಶರಾವತಿಯಿಂದ ಪೂರೈಸುತ್ತಿದ್ದೇವೆ.

ಎಚ್. ಮೋಹನ್,ಮುಖ್ಯ ಎಂಜಿನಿಯರ್, ಶರಾವತಿ ಯೋಜನೆ

ನವೆಂಬರ್‌ನಲ್ಲಿಉತ್ಪಾದನೆ

ದಿನ ಉತ್ಪಾದನೆ (ಯೂನಿಟ್‌ಗಳಲ್ಲಿ)

ನ. 1 1.12 ಕೋಟಿ
ನ. 2 1.38 ಕೋಟಿ
ನ. 3 1.22 ಕೋಟಿ
ನ. 4 96.31 ಲಕ್ಷ
ನ .5 1.40 ಕೋಟಿ
ನ. 6 1.65 ಕೋಟಿ
ನ. 7 93.23 ಲಕ್ಷ
ನ. 8 96.83 ಲಕ್ಷ
ನ. 9 1.35 ಕೋಟಿ
ನ.10 1.46 ಕೋಟಿ
ನ. 11 1.22 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.