ADVERTISEMENT

ಶರಾವತಿ ವಿದ್ಯುತ್‌ ಯೋಜನೆ ಟೆಂಡರ್‌ ಪ್ರಕ್ರಿಯೆ ಊರ್ಜಿತ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:37 IST
Last Updated 25 ಏಪ್ರಿಲ್ 2024, 15:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಅಂದಾಜು ₹8,300 ಕೋಟಿಯ ಬೃಹತ್‌ ಮೊತ್ತದ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್‌ ಯೋಜನೆಯ ಟೆಂಡರ್‌ ಪ್ರಕ್ರಿಯೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದ್ದು, ಈ ಸಂಬಂಧ ಎಲ್‌ ಆ್ಯಂಡ್‌ ಟಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಜಾರಿಗೆ ಮುಂದಾಗಿತ್ತು. ಈ ಸಂಬಂಧ ಟೆಂಡರ್‌ ಕರೆಯಲಾಗಿತ್ತು. ಕಾಮಗಾರಿ ಆರಂಭಿಸುವ ಪ್ರಕ್ರಿಯೆಯಲ್ಲಿದ್ದ ಸಂದರ್ಭದಲ್ಲಿ ಟೆಂಡರ್‌ ಪ್ರಕ್ರಿಯೆಯಿಂದ ದೂರ ಉಳಿದಿದ್ದ ಎಲ್‌ ಆ್ಯಂಡ್‌ ಟಿ ಕಂಪನಿ, ‘ಟೆಂಡರ್‌ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಗಿದೆ’ ಎಂದು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಟೆಂಡರ್‌ನಲ್ಲಿ ಪಾಲ್ಗೊಳ್ಳದ ಅರ್ಜಿದಾರರು ಟೆಂಡರ್‌ ಪ್ರಕ್ರಿಯೆ ತಡೆಯುವಂತೆ ಮನವಿ ಮಾಡುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿಯನ್ನು ವಜಾಗೊಳಿಸಿತ್ತು.

ADVERTISEMENT

ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಎಲ್‌ ಆ್ಯಂಡ್‌ ಟಿ, ‘ಟೆಂಡರ್‌ ಪ್ರಕ್ರಿಯೆಯನ್ನು ಕೇವಲ 21 ದಿನಗಳಲ್ಲಿ ತರಾತುರಿಯಲ್ಲಿ ಮುಗಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಇಂತಹುದೇ ಟೆಂಡರ್‌ ಪ್ರಕ್ರಿಯೆಗೆ ವಿಪುಲ ಕಾಲಾವಕಾಶ ನೀಡಲಾಗಿದೆ’ ಎಂದು ಪ್ರತಿಪಾದಿಸಿತ್ತು.

ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಕಾಯ್ದಿರಿಸಿದ್ದ ಆದೇಶವನ್ನು ಗುರುವಾರ ಪ್ರಕಟಿಸಿದೆ.

‘ಟೆಂಡರ್‌ ಪ್ರಕ್ರಿಯೆಯ ಅವಧಿಯನ್ನು ನಿಗದಿಪಡಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್‌ಗೆ (ಕೆಪಿಪಿಪಿ) ಸಂಪೂರ್ಣ ಅಧಿಕಾರವಿದೆ. ವಿಶೇಷ ಕಾರಣಕ್ಕಾಗಿ ಟೆಂಡರ್‌ ಅವಧಿಯನ್ನು ಕಡಿಮೆ ಮಾಡಲು ಅದು ತನ್ನದೇ ಆದ ಸ್ವಯಮಾಧಿಕಾರ ಹೊಂದಿದೆ. ಮೇಲ್ಮನವಿದಾರರು ಪ್ರೀ ಬಿಡ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈಗ ತಕರಾರು ವ್ಯಕ್ತಪಡಿಸಿರುವುದು ನೆಪಮಾತ್ರ’ ಎಂಬ ಅಭಿಪ್ರಾಯದೊಂದಿಗೆ ಎಲ್‌ ಆ್ಯಂಡ್‌ ಟಿ ವಾದವನ್ನು ತಳ್ಳಿ ಹಾಕಿದೆ.

ಇದರಿಂದಾಗಿ ಪ್ರಸ್ತುತ ಕೆಪಿಸಿಎಲ್‌ ನಡೆಸಿರುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಟೆಂಡರ್‌ ಅನ್ನು ಕಡಿಮೆ ದರ ನಮೂದಿಸಿದ್ದ ಮೇಘ ಎಂಜಿನಿಯರಿಂಗ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್‌ ಲಿಮಿಟೆಡ್‌ (ಎಂಇಐಎಲ್‌) ಕಂಪನಿ ತನ್ನದಾಗಿಸಿಕೊಂಡಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.